ದಾಸವಾಳ ಹೂವು ಕೈತೋಟದ ಅಂದವನ್ನು ಹೇಗೆ ಹೆಚ್ಚಿಸುತ್ತದೆಯೋ ಹಾಗೆಯೇ ನಮ್ಮ ಸೌಂದರ್ಯ , ಆರೋಗ್ಯವನ್ನು ಹೆಚ್ಚಿಸಬಲ್ಲದು.ದಾಸವಾಳ ಹೂವಿನಲ್ಲಿ ಕೆಂಪು ಹಾಗು ಬಿಳಿ ದಾಸವಾಳ ಔಷಧೀಯ ಗುಣ ಹೊಂದಿದೆ. ಅದರಲ್ಲೂ ಬಿಳಿ ದಾಸವಾಳ ಹೂವಿನ ಗಿಡ ಆಯುರ್ವೇದದಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ.ಪ್ರಮುಖವಾಗಿ ಕೂದಲ ಆರೈಕೆ ಹಾಗು ಮಹಿಳೆಯರಲ್ಲಿ ಕಾಡುವ ಬಿಳಿಮುಟ್ಟಿನ ಸಮಸ್ಯೆಗೆ ಬಿಳಿ ದಾಸವಾಳ ಪ್ರಮುಖ ಮದ್ದು.
ದಾಸವಾಳ ಹೂವು ಜೊತೆಗೆ ಎಲೆಯನ್ನು ಸ್ವಲ್ಪ ನೀರಿನಲ್ಲಿ ಸರಿಯಾಗಿ ಹಿಂಡಿದಾಗ ಲೋಳೆ ರೀತಿಯಲ್ಲಿ ರಸ ಸಿಗುತ್ತದೆ. ಈ ರಸವನ್ನು ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತಲೆಗೆ ಸ್ನಾನ ಮಾಡಬೇಕು. ವಾರಕ್ಕೆ ಎರಡು ಬಾರಿ ಈ ರೀತಿ ತಲೆ ಸ್ನಾನ ಮಾಡಿದರೆ ಕೂದಲು ನುಣುಪಾಗುವುದಲ್ಲದೇ ಕ್ರಮೇಣ ಕಪ್ಪಾಗಿ ಸೊಂಪಾಗಿ ಬೆಳೆಯಲು ಸಹಕಾರಿ.
ಇನ್ನು ಮಹಿಳೆಯರನ್ನು ಹೆಚ್ಚಾಗಿ ಕಾಡುವ ಸಮಸ್ಯೆ ಬಿಳಿಮುಟ್ಟಿನ ಸಮಸ್ಯೆ. ಇದಕ್ಕೆ ಬಿಳಿ ದಾಸವಾಳದ ಹೂವು ಉತ್ತಮ ಔಷಧ. ಪ್ರತಿದಿನ ಒಂದೊಂದು ಹೂವು ತಿನ್ನಬಹುದು ಅಥವಾ ಕುದಿಯುವ ನೀರಿಗೆ ಹೂವು ಹಾಕಿ , ಸ್ವಲ್ಪ ಹಾಲು, ಓಮ, ಸಿಹಿಗೆ ಬೆಲ್ಲ ಅಥವಾ ಸಕ್ಕರೆ ಸೇರಿಸಿ ಸೇವಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆ.