ಮೂಡುಬಿದಿರೆ:ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಒಪ್ಪಿಸಲು ಅನುಕೂಲವಾಗುವಂತೆ ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೆ ತಂದು ರೈತರಿಗೆ ಅನ್ಯಾಯವೆಸಗಿದೆ. ಕಾರ್ಪೊರೇಟ್ ಪದ್ದತಿಯ ಕೃಷಿಯನ್ನು ರೈತರು ಹಿಮ್ಮೆಟ್ಟಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಕೆ. ಯಾದವ ಶೆಟ್ಟಿ ಹೇಳಿದರು.
ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ಮಂಗಳವಾರ ತಹಶಿಲ್ದಾರ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. 1961 ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಕೃಷಿ ಭೂಮಿ ಬಂಡವಾಳಶಾಹಿಗಳ ಕೈ ಸೇರಿ ರೈತರು ಬೀದಿಗೆ ಬೀಳುವ ಅಪಾಯ ಇದೆ. ಲಾಕ್ ಡೌನ್ ಸಂದರ್ಭವನ್ನು ಸರಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದರು.
ಮೂಡುಬಿದಿರೆ ವಲಯಾಧ್ಯಕ್ಷ ಲಿಯೊ ನಝರತ್ ಮಾತನಾಡಿ ಸರಕಾರದ ಕಾನೂನು ತಿದ್ದುಪಡಿಯಿಂದ ರೈತರಿಗೆ ಅನ್ಯಾಯವಾಗಿದೆ ಎಂದರು. ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಚೌಟ ಮಾತನಾಡಿ, ಒಂದೆಡೆ ರೈತರ ಬಗ್ಗೆ ಭಾಷಣ ಮಾಡುವ ಸರಕಾರ ಮತ್ತೊಂದೆಡೆ ರೈತರನ್ನು ಸಂಕಷ್ಟಕ್ಕೀಡು ಮಾಡುವ ಕಾಯ್ದೆಯನ್ನು ಜಾರಿಗೆ ತಂದಿದೆ. ಇದರ ವಿರುದ್ಧ ರೈತರು ಸಂಘಟಿತರಾಗಬೇಕು ಎಂದರು. ಪ್ರಮುಖರಾದ ಆಲ್ವಿನ್ ಮಿನೇಜಸ್, ರಮಣಿ, ಸುಂದರ ಶೆಟ್ಟಿ, ಕೃಷ್ಣಪ್ಪ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.ಉಪತಹಶಿಲ್ದಾರ್ ದೀಪಕ್ ಎಸ್. ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮೂಡುಬಿದಿರೆಯಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯಿಂದ ಪ್ರತಿಭಟನೆ
ವಾಣಿಜ್ಯ ಜಾಹಿರಾತು
ವಾಣಿಜ್ಯ ಜಾಹಿರಾತು