ವಾಣಿಜ್ಯ ಜಾಹಿರಾತು

ಬಂಟ್ವಾಳ: ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ 2 ಕಿ.ಮೀ. ಸುತ್ತಳತೆಯ ಸುತ್ತ ಮುತ್ತ ಪ್ರದೇಶವನ್ನು ಧಾರ್ಮಿಕ ಚಟುವಟಿಕೆಗಳ ಉದ್ದೇಶಕ್ಕಾಗಿ ಗಣಿಗಾರಿಕೆ ಮತ್ತು ಕಲ್ಲುಪುಡಿ (ಕ್ರಷರ್‌) ಚಟುವಟಿಕೆಯನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕಾರಿಂಜ ದೇವಸ್ಥಾನದ ಸಂರಕ್ಷಣೆಗಾಗಿ ಪರಿಸರದಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಲು ಮತ್ತು ಪಾವಿತ್ರ್ಯ ಉಳಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಹೋರಾಟ ನಡೆಸಿತ್ತು. ಅದಕ್ಕೆ ಪೂರಕವಾಗಿ ಶಾಸಕ ರಾಜೇಶ್‌ ನಾಯ್ಕೈ ಉಳಿಪ್ಪಾಡಿಗುತ್ತು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಅವರನ್ನು ಇತ್ತೀಚೆಗೆ ಕ್ಷೇತ್ರಕ್ಕೆ ಕರೆಸಿ ಗಣಿಗಾರಿಕೆ ನಿಷೇಧ ಪ್ರದೇಶವೆಂದು ಘೋಷಿಸುವಂತೆ ಸರಕಾರಕ್ಕೆ ಒತ್ತಡ ಹೇರಿದ್ದರು.

ಮುಖ್ಯಮಂತ್ರಿಗಳ ನಿರ್ದೇಶನದಂತೆ ಕ್ಷೇತ್ರದ ಸುತ್ತ ಗಣಿಗಾರಿಕೆ ನಿಷೇಧಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲು ದ.ಕ. ಜಿಲ್ಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಮಂಗಳೂರು ಸಹಾಯಕ ಕಮಿಷನರ್‌ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರ ಮೂಲಕ ದೇವಸ್ಥಾನದ ಸುತ್ತಮುತ್ತ ಜಂಟಿ ಸ್ಥಳ ಪರಿಶೀಲನೆ ನಡೆಸಲಾಗಿತ್ತು.

ಈ ಪರಿಶೀಲನೆಯ ವರದಿಯ ಆಧಾರದಲ್ಲಿ ಜಿಲ್ಲಾಧಿಕಾರಿಯವರು ಕಾರಿಂಜ ದೇವಸ್ಥಾನದ ಸುತ್ತಮುತ್ತ 2 ಕಿ.ಮೀ. ವ್ಯಾಪ್ತಿಯನ್ನು ಗಣಿಗಾರಿಕೆ ಚಟುವಟಿಕೆ ನಿಷೇಧಿತ ಪ್ರದೇಶವೆಂದು ಘೋಷಿಸುವ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು

ಪ್ರಸ್ತುತ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994ರ ನಿಯಮ 8(3)ರಲ್ಲಿನ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಗಣಿಗಾರಿಕೆ ನಿಷೇಧಿಸಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಧೀನ ಕಾರ್ಯದರ್ಶಿಯವರು ಆದೇಶ ಹೊರಡಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.