ಇದೇ ಡಿಸೆಂಬರ್ ತಿಂಗಳಲ್ಲಿ ನಡೆಯುವ ಮತ್ತೊಂದು ಅದ್ಭುತಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಸೌರವ್ಯೂಹದ ಅತಿದೊಡ್ಡ ಗ್ರಹಗಳೆರಡು ಪರಸ್ಪರ ಹತ್ತಿರಕ್ಕೆ ಬರಲಿವೆ. ಕ್ರಿಸ್‍ಮಸ್ ಸಮಯದಲ್ಲಿ ಈ ಅದ್ಭುತ ನಡೆಯಲಿದೆ ಎಂದು ಅಮೆರಿಕದ ಸಿಎನ್‍ಎನ್ ಚಾನಲ್ ವರದಿ ಮಾಡಿದೆ.
ಡಿ.21ರಂದು ಗುರು ಮತ್ತು ಶನಿ ಗ್ರಹಗಳು ಆಕಾಶದಲ್ಲಿ ನಿಕಟವಾಗಿ ಜೋಡಿಸಲ್ಪಡಲಿವೆ. ಇವುಗಳು ಜೋಡಿ ಗ್ರಹಗಳಂತೆ ಕಾಣಿಸಲಿವೆ. ಈ ನಿಕಟ ವಿಧಾನವನ್ನು ಸಂಯೋಗ ಎಂದು ಕರೆಯಲಾಗುತ್ತದೆ.
ಈ ಎರಡು ಗ್ರಹಗಳ ನಡುವಿನ ಜೋಡಣೆ ಅಪರೂಪವೆನಿಸಿದೆ. ಪ್ರತಿ 20 ವರ್ಷಗಳಿಗೊಮ್ಮೆ ಗ್ರಹಗಳು ಒಂದಕ್ಕೊಂದು ಹತ್ತಿರವಾಗುತ್ತವೆ, ಆದರೆ ಡಿ.21ರಂದು ಹೆಚ್ಚು ಹತ್ತಿರವಾಗಲಿದ್ದು, ಇದು ಅಪರೂಪ ಎಂದು ಟೆಕ್ಸಾಸ್‍ನ ರೈಸ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಪ್ಯಾಟ್ರಿಕ್ ಹಾರ್ಟಿಜನ್ ತಿಳಿಸಿದ್ದಾರೆ.
ಡಿ.16ರಿಂದ 25ರ ಮಧ್ಯದಲ್ಲಿ ಎರಡು ಗ್ರಹಗಳು ಈವರೆಗೆ ಸಂಭವಿಸದಷ್ಟು ಹತ್ತಿರವಾಗಲಿವೆ. ಈ ದಿನಗಳಲ್ಲಿ ಸೂರ್ಯಾಸ್ತದ ನಂತರ ಪಶ್ಚಿಮ ಆಕಾಶದಲ್ಲಿ ಎರಡು ಗ್ರಹಗಳು ಹತ್ತಿರವಾಗುವುದನ್ನು ಕಾಣಬಹುದು. ಡಿ.21ರಂದು ಎರಡೂ ಗ್ರಹಗಳು ಜತೆಜತೆಗೆ ಕಾಣಿಸಿಕೊಳ್ಳಲಿವೆ ಎಂದು ಹಾರ್ಟಿಜನ್ ತಿಳಿಸಿದ್ದಾರೆ.
ದೂರದರ್ಶಕದಿಂದ ವೀಕ್ಷಿಸುವ ಬಾಹ್ಯಾಕಾಶ ಆಸಕ್ತರಿಗೆ ಎರಡು ಗ್ರಹಗಳು ಹತ್ತಿರವಿರುವಂತೆ ಕಾಣಿಸಿಕೊಂಡರೂ ಅವು ನೂರಾರು ಮಿಲಿಯನ್ ಮೈಲುಗಳಷ್ಟು ದೂರದಲ್ಲಿರುತ್ತವೆ ಎಂದು ನಾಸಾ ಹೇಳಿದೆ.
ಮೋಡವಿಲ್ಲದ ಸ್ಪಷ್ಟ ಆಕಾಶವಿದ್ದರೆ ಪ್ರಪಂಚದಾದ್ಯಂತ ಈ ದೃಷ್ಯವನ್ನು ದೂರದರ್ಶಕದಿಂದ ವೀಕ್ಷಿಸಬಹುದು, ಸಮಭಾಜಕದ ಸಮೀಪದಲ್ಲಿರುವವರಿಗೆ ಹೆಚ್ಚು ಸ್ಪಷ್ಟವಿರುವ ಚಿತ್ರಣ ಕಾಣಸಿಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.