ಉಡುಪಿ: ಜಿಲ್ಲೆಯಲ್ಲಿ ಮತ್ತೆ ೯ ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ವರದಿಯಲ್ಲಿ ದೃಢಪಟ್ಟಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ. ಈ ಪೈಕಿ ಕುಂದಾಪುರದಿಂದ ಬೆಂಗಳೂರಿಗೆ ಪ್ರಯಾಣಿಸುವ ಬಸ್ಸಿನ ಇಬ್ಬರು ಚಾಲಕರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ಇದರೊಂದಿಗೆ ಸ್ಥಳೀಯ ಬಟ್ಟೆ ಅಂಗಡಿ ಮಾಲಕರೊಬ್ಬರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಅವರ ಮಗ ಬೆಂಗಳೂರಿಗೆ ಪ್ರಯಾಣ ಮಾಡಿರುವ ಹಿನ್ನೆಲೆಯಿದೆ. ಅವರ ಗಂಟಲ ದ್ರವ ಸಂಗ್ರಹಿಸಿ ಟೆಸ್ಟ್ಗೆ ಕಳುಹಿಸಲಾಗಿದೆ ಎಂದು ಅವರು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಭಾನುವಾರ ಮೃತಪಟ್ಟ ಬೈಂದೂರಿನ ವ್ಯಕ್ತಿಗೆ ಕೊರೊನಾ, ವರದಿಯಲ್ಲಿ ದೃಢ
ಇನ್ನು ಮುಂಬಯಿನಿಂದ ಆಗಮಿಸಿದ ಬೈಂದೂರಿನ 48 ವರ್ಷದ ವ್ಯಕ್ತಿಯೋರ್ವರು ಭಾನುವಾರ ಮೃತಪಟ್ಟಿದ್ದು, ಅವರಿಗೆ ಕೊರೊನಾ ಇರುವುದು ವರದಿಯಲ್ಲಿ ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಕೋವಿಡ್-೧೯ ಗೆ ಮೂವರು ಬಲಿಯಾಗಿದ್ದಾರೆ. ಇವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಮುಂಬಯಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಇಲ್ಲಿಗೆ ಬಂದ ನಂತರ ಸ್ಥಳೀಯಾಡಳಿತಕ್ಕಾಗಲೀ, ಆರೋಗ್ಯ ಇಲಾಖೆಗಾಗಲೀ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. ಮರಣಾನಂತರ ಗಂಟಲ ದ್ರವ ಟೆಸ್ಟ್ ಮಾಡಲಾಗಿದ್ದು ಕೊರೊನಾ ಇರುವುದು ದೃಢವಾಗಿದೆ. ಅವರ ಅಂತ್ಯಸಂಸ್ಕಾರವನ್ನು ನಿಯಮದಂತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.