ಮಂಗಳೂರು: ಫಾಸ್ಟ್ ಫುಡ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಇಡೀ ಅಂಗಡಿ ಸುಟ್ಟು ಭಸ್ಮವಾದ ಘಟನೆ ಕುಂಪಲ ಬಾಲಕೃಷ್ಣ ಮಂದಿರದ ಬಳಿ ನಡೆದಿದೆ.
ಕುಂಪಲ ಆಶ್ರಯ ಕಾಲೋನಿಯ ನಿವಾಸಿಗಳಾದ ಮೋಹಿನಿ ಮತ್ತು ದೀಕ್ಷಿತ ಎಂಬವರಿಗೆ ಸೇರಿದ ಫಾಸ್ಟ್ ಪುಡ್ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಸ್ನೇಹಿತೆಯರಾಗಿದ್ದ ಮೋಹಿನಿ ಹಾಗೂ ದೀಕ್ಷಿತ ಕಳೆದ ಕೆಲ ವರ್ಷಗಳ ಹಿಂದೆ ಕುಂಪಲ ಬಾಲಕೃಷ್ಣ ಮಂದಿರದ ಬಳಿ ಫಾಸ್ಟ್ ಫುಡ್ ಅಂಗಡಿ ಆರಂಭಿಸಿದ್ದರು. ನಿನ್ನೆ ಎಂದಿನಂತೆ ಅಂಗಡಿಯನ್ನು ಮುಚ್ಚಿ ಮನೆಗೆ ತೆರೆಳಿದ್ದಾರೆ. ಆದರೆ ರಾತ್ರಿ ಇಡೀ ಅಂಗಡಿಯೇ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದೆ.
ಶಾರ್ಟ್ ಸರ್ಕ್ಯುಟ್ ನಿಂದ ಅಂಗಡಿಗೆ ಬೆಂಕಿ ತಗುಲಿರುವುದಾಗಿ ಶಂಕಿಸಲಾಗಿದೆ. ಫಾಸ್ಟ್ ಫುಡ್ ವ್ಯಾಪಾರದಲ್ಲೇ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ಸ್ನೇಹಿತೆಯರು ಇದೀಗ ಬೀದಿಗೆ ಬಿದ್ದಿದ್ದಾರೆ.
ಬೆಂಕಿಯಿಂದಾಗಿ ಅಂಗಡಿಯೊಳಗಿದ್ದ ರೆಫ್ರಿಜರೇಟರಿನ ಗ್ಯಾಸ್ ಸಿಲಿಂಡರ್ ಸಿಡಿದಿದ್ದು ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ. ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದ ಒಂದು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದ್ದು, ಸೋಮೇಶ್ವರ ಪುರಸಭಾ ಅಧಿಕಾರಿಗಳು ಮತ್ತು ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.