ಅಸ್ಸಾಂ: ಪ್ರತಿಯೊಬ್ಬರೂ ತಮ್ಮ ಇಚ್ಚೆಯ ಮನೆಯಾಗಲಿ ಅಥವಾ ಯಾವುದೇ ವಾಹನವಾಗಲಿ ಖರೀದಿಸಲು ಸಾಕಷ್ಟು ಕಷ್ಟಪಟ್ಟು ಹಣ ಹೊಂದಿಸುತ್ತಾರೆ. ತಮ್ಮ ಕನಸು ನನಸಾಗಿಸಲು ಸತತ ಪರಿಶ್ರಮ ಪಡುತ್ತಾರೆ. ಅಂತೆಯೇ ಇಲ್ಲೊಬ್ಬರು ನಾಣ್ಯಗಳನ್ನು ಸಂಗ್ರಹಿಸಿಟ್ಟು ಸ್ಕೂಟರ್ ಅನ್ನು ಖರೀದಿಸಿದ್ದಾರೆ.
ಅಸ್ಸಾಂನ ಪುಟ್ಟ ಅಂಗಡಿಯ ಮಾಲೀಕರೊಬ್ಬರು ದ್ವಿಚಕ್ರ ವಾಹನವನ್ನು ಕೊಂಡುಕೊಳ್ಳಬೇಕು ಎನ್ನುವ ಆಸೆಯಿಂದ ತನ್ನ ದುಡಿಮೆಯ ಒಂದೊಂದು ರೂಪಾಯಿ ಹಣವನ್ನೂ ಕೂಡಿಟ್ಟು, ಸ್ಕೂಟರ್ ಖರೀದಿಸಿದ್ದಾರೆ. ತಾವು ಕೂಡಿಟ್ಟ ಚಿಲ್ಲರೆ ಕಾಸನ್ನು ಬುಟ್ಟಿ ತುಂಬಾ ತುಂಬಿಕೊಂಡು ಶೋರೂಂ ಗೆ ಬಂದು ಸ್ಕೂಟರ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಸದ್ಯ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ಈ ಕುರಿತು ಹಿರಾಕ್ ಜೆ ದಾಸ್ ಎನ್ನುವವರು ವಿಡಿಯೋವನ್ನು ಹಂಚಿಕೊಂಡಿದ್ದು, ನಾಣ್ಯಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಬಂದು ಅದನ್ನು ಬುಟ್ಟಿಗೆ ಹಾಕಿ ನಂತರ ಅದನ್ನು ಎಣಿಸುವುದನ್ನು ಕಾಣಬಹುದು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಸ್ವಂತ ಹಣದಲ್ಲಿ ವಾಹನವನ್ನು ಖರೀದಿಸಬೇಕು ಎನ್ನುವ ಆಸೆ ಇದ್ದರಷ್ಟೇ ಸಾಲದು, ಅದನ್ನು ಸಾಧಿಸಿ ತೋರಿಸಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಅಸ್ಸಾಂನ ಈ ವ್ಯಕ್ತಿ. ಇವರ ಈ ಛಲಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.