ಮಂಗಳೂರು : ಅಕ್ಟೋಬರ್ 18 ರಂದು ಸುರತ್ಕಲ್ ಟೋಲ್ ಗೇಟ್ ವಿರುದ್ಧ ಬೃಹತ್ ಪ್ರತಿಭಟನೆ ನಡಸಿದ್ದ ಹೋರಾಟಗಾರರ ಮೇಲೆ ಇದೀಗ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದೆ. ಸಾವಿರಕ್ಕೂ ಹೆಚ್ಚು ಮಂದಿ ಮಂಗಳವಾರ ಸುರತ್ಕಲ್ ಟೋಲ್ ಗೇಟ್ ಬಳಿ ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು.
ರಾಷ್ಟ್ರೀಯ ಹೆದ್ದಾರಿಯನ್ನು ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು ಎನ್ನುವ ನಿಯಮ ಇದ್ದರೂ ಕೂಡಾ ಬಲವಂತವಾಗಿ ಪ್ರತಿಭಟನೆ ನಡೆಸಿ ಹೆದ್ದಾರಿಗೆ ತಡೆಯೊಡ್ಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೀಗಾಗಿ ಪ್ರತಿಭಟನಾಕಾರರ ವಿರುದ್ಧ ಸಾರ್ವಜನಿಕರ ವಾಹನ ಸುಗಮ ಸಂಚಾರಕ್ಕೆ ಅಡ್ಡಿ ಆರೋಪದಡಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಟೋಲ್ ಸಂಗ್ರಹ ಏಜೆನ್ಸಿ ನೂರ್ ನೂರ್ ಮಹಮ್ಮದ್ ಕಂಪನಿಯ ಮ್ಯಾನೇಜರ್ ಶಿಶುಪಾಲ್ ಹಾಗೂ ಎನ್ ಎಂಪಿಸಿಆರ್ ಸಿ ಎಲ್ ಪ್ರಾಜೆಕ್ಟ್ ಡೈರೆಕ್ಟರ್ ಲಿಂಗೇಗೌಡ ಅವರು ಪ್ರತ್ಯೇಕ ಎರಡು ದೂರು ದಾಖಲಿಸಿದ್ದಾರೆ.
ಹೈವೆಯಲ್ಲಿ 60 ಕಿಲೋಮೀಟರ್ ಅಂತರದಲ್ಲಿ ಟೋಲ್ ಇರಬೇಕಾದದ್ದು ಹೆದ್ದಾರಿ ಪ್ರಾಧಿಕಾರದ ನಿಯಮವಾಗಿದೆ. ಆದರೆ ಸುರತ್ಕಲ್ ಟೋಲ್ ಆ ನಿಯಮವನ್ನು ಮೀರಿದೆ ಎಂಬ ಆರೋಪವಿದೆ. ಇದಲ್ಲದೆ ಸುರತ್ಕಲ್ ಟೋಲ್ ಗೇಟ್ ನಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎನ್ನುವ ಆರೋಪ ಕೂಡಾ ಇದ್ದು, ಈ ಹಿನ್ನಲೆ ಟೋಲ್ ಮುಚ್ಚುವಂತೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಅದರಂತೆ ಸುರತ್ಕಲ್ ಟೋಲ್ ಗೇಟ್ ವಿರೋಧಿ ಸಮಿತಿ ಹೆಸರಲ್ಲಿ ಅ.18ರಂದು ಸುರತ್ಕಲ್ ಟೋಲ್ ಗೇಟ್ ಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರು. ಈ ವೇಳೆ ಹಲವು ಸಮಯ ಟ್ರಾಫಿಕ್ ಬ್ಲಾಕ್ ಆಗಿತ್ತು, ಅಲ್ಲದೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ನೂಕಾಟ ತಳ್ಳಾಟ ಕೂಡಾ ನಡೆದಿದೆ.
ಸುಮಾರು 20 ರಿಂದ 25 ಜನರ ವಿರುದ್ದ ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ 143, 147, 341, 283, 149 ರಡಿ ಪ್ರಕರಣ ದಾಖಲಾಗಿದೆ.