ಜೈಲರ್ ಸಿನಿಮಾದ ಶೂಟಿಂಗ್ ಗಾಗಿ ಸೂಪರ್ ಸ್ಟಾರ್ ರಜನಿಕಾಂತ್ ಮಂಗಳೂರಿಗೆ ಆಗಮಿಸಿದ್ದಾರೆ. ರಜನಿಕಾಂತ್ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ‘ಜೈಲರ್’ ಸಿನಿಮಾದ ಶೂಟಿಂಗ್ ಪಿಲಿಕುಳದ ಗುತ್ತಿನ ಮನೆಯಲ್ಲಿ ನಡೆಯುತ್ತಿದ್ದು, ಕರಾವಳಿಯನ್ನು ಬಿಂಬಿಸುವಂತಹ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿಯಲಾಗುತ್ತಿದೆ.
ಪಿಲಿಕುಳದ ಗುತ್ತಿನ ಮನೆಯು ಮಂಗಳೂರಿನ ಹೊರವಲಯದಲ್ಲಿದ್ದು, ಇಲ್ಲಿ ಜೈಲರ್ ಸಿನಿಮಾಗಾಗಿಯೇ ವಿಶೇಷ ಸೆಟ್ ಅನ್ನು ಹಾಕಲಾಗಿದೆ. ಹಳ್ಳಿಯ ವಾತಾವರಣವನ್ನು ಬಿಂಬಿಸುವಂತಹ ಮತ್ತು ಕುಸ್ತಿ ಅಖಾಡವನ್ನು ಗುತ್ತಿಗೆ ಮನೆಯೊಳಗೆ ಸೃಷ್ಟಿಸಲಾಗಿದೆ. ಶೂಟಿಂಗ್ ಗಾಗಿ ಪಿಳಿಕುಳದ ಗುತ್ತಿಗೆ ಮನೆಯಲ್ಲಿ ಎತ್ತಿನ ಗಾಡಿ ಸೇರಿದಂತೆ ಹಲವು ಹಳ್ಳಿ ಸಂಸ್ಕೃತಿಯನ್ನು ಬಿಂಬಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ.
ಪಿಳಿಕುಳದ ಗುತ್ತಿಗೆ ಮನೆಯಲ್ಲಿಯೇ ಎರಡು ದಿನಗಳ ಕಾಲ ಜೈಲರ್ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಕುಸ್ತಿ ದೃಶ್ಯ ಸೇರಿದಂತೆ ಸಿನಿಮಾಗೆ ಸೇರಿದ ಮಹತ್ವದ ಹಲವು ಸನ್ನಿವೇಶಗಳನ್ನು ಚಿತ್ರೀಕರಣ ಮಾಡಲಾಗುತ್ತದೆ.
ಜೈಲರ್ ರಜನಿಕಾಂತ್ ನಟನೆಯ 169ನೇ ಸಿನಿಮಾವಾಗಿದ್ದು ಚಿತ್ರದಲ್ಲಿ ಶಿವರಾಜ್ ಕುಮಾರ್ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.