ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದೊಳಗಿನ ಗುಂಡಿಗಳ ಅವ್ಯವಸ್ಥೆಯಿಂದ ತನ್ನ ಗೆಳೆಯ ಮೃತಪಟ್ಟಿದ್ದು, ಈ ಹಿನ್ನಲೆ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಯುವಕನೋರ್ವ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮಂಗಳೂರಿನ ಲಿಖಿತ್ ಎಂಬ ಯುವಕ ಈ ಏಕಾಂಗಿ ಹೋರಾಟ ನಡೆಸಿದ್ದು, ಇತ್ತೀಚೆಗೆ ನಂತೂರಿನಲ್ಲಿ ರಸ್ತೆಗುಂಡಿಗೆ ಬಿದ್ದು ಮೃತಪಟ್ಟ ತನ್ನ ಗೆಳೆಯ ಆತಿಷ್‌ನ ಸಾವು ಒಂದು ಕೊಲೆ. ಹಾಗಾಗಿ ತನ್ನ ಗೆಳೆಯನ ಸಾವಿಗೆ ನ್ಯಾಯ ಸಿಗಬೇಕಾಗಿದೆ ಎಂದು ಆಗ್ರಹಿಸಿ ಈ ವಿನೂತನ ಶೈಲಿಯ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಲಿಖಿತ್, ಮಿತ್ರ ಆತಿಷ್ ನಂತೂರ್‌ನಲ್ಲಿ ರಸ್ತೆಯಲ್ಲಿದ್ದ ಹೊಂಡ ತಪ್ಪಿಸುವ ಭರದಲ್ಲಿ ಬೈಕ್‌ನಿಂದ ಬಿದ್ದು, ತಲೆಗೆ ಏಟಾಗಿ ಮೃತಟ್ಟಿದ್ದಾರೆ. ಹಾಗಂತ ಇದು ಅಪಘಾತವಲ್ಲ, ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸಿದ ಕೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ಉತ್ತಮ ರಸ್ತೆ ನಿರ್ಮಿಸುವ ಮೂಲಕ ಆತಿಷ್ ಸಾವಿಗೆ ನ್ಯಾಯ ಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಲಿಖಿತ್ ಸಹಿತ ಆತನ ಗೆಳೆಯರು ಜಸ್ಟೀಸ್ ಫಾರ್ ಆತಿಷ್ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿದ್ದು, ಅದರ ಭಾಗವಾಗಿ ಈ ವಿನೂತನ ಪ್ರತಿಭಟನೆ ನಡೆದಿದೆ.