ಬಂಟ್ವಾಳ: ಶಾಸಕ ಹರೀಶ್ ಪೂಂಜಾ ಸಂಚರಿಸುತ್ತಿದ್ದ ಕಾರು ಬೆನ್ನಟ್ಟಿ ಮಾರಕಾಯುಧ ತೋರಿಸಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪಳ್ನೀರು ನಿವಾಸಿ ರಿಯಾಝ್ ಎಂಬಾತ ಬಂಧಿತ ಆರೋಪಿ.
ಫರಂಗಿಪೇಟೆಯಲ್ಲಿ ಈ ಘಟನೆ ನಡೆದಿರುವ ಬಗ್ಗೆ ಶಾಸಕ ಹರೀಶ್ ಪೂಂಜಾ ಅವರ ಕಾರು ಚಾಲಕ ನವೀನ್ ಎಂಬವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ರಿಯಾಝ್ ಗೆ ವಿರುದ್ಧ ಯಾವುದೇ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣಗಳು ಇಲ್ಲ. ರಸ್ತೆಯಲ್ಲಿ ಓವರ್ ಟೆಕ್ ಮಾಡುವ ವಿಚಾರದಲ್ಲಿ ಕಿರಿಕ್ ಉಂಟಾಗಿ ಸಂಘರ್ಷಕ್ಕೆ ಕಾರಣವಾಗಿದೆ. ಆರೋಪಿಯ ಬಳಿ ಇವರೆಗೆ ಯಾವುದೇ ಆಯುಧ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿಗೆ ತೆರಳುತ್ತಿದ್ದಾಗ ಫರಂಗಿಪೇಟೆಯಲ್ಲಿ ಶಾಸಕರ ಕಾರು ಹಿಂಬಾಲಿಸಿಕೊಂಡು ಬಂದ ಸ್ಕಾರ್ಪಿಯೋ ಕಾರು ಚಾಲಕ ಅವಾಚ್ಯವಾಘಿ ಬೈದು ಆಯುಧ ತೋರಿಸಿ ಪರಾರಿಯಾಗಿದ್ದರ ಬಗ್ಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೋಲೀಸರು ಆರೋಪಿ ಚಾಲಕ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.