ಪ್ರತಿ ಬಾರಿಯೂ ಚುನಾವಣೆ ಹತ್ತಿರವಾಗುತ್ತಿದ್ದಂತೆ ಡಾ.ರಾಜ್ ಕುಮಾರ್ ಕುಟುಂಬ ಸದಸ್ಯರ ಹೆಸರು ಕೇಳಿ ಬರುತ್ತದೆ. ಈ ಹಿಂದೆ ಡಾ.ರಾಜ್ ಕುಮಾರ್ ಅವರನ್ನು ಚುನಾವಣೆಗೆ ನಿಲ್ಲಿಸಲು ಸಾಕಷ್ಟು ಕಸರತ್ತು ಮಾಡಲಾಗಿತ್ತು. ಆದರೆ ಯಾವುದೇ ಕಾರಣಕ್ಕೂ ತಾನೂ ರಾಜಕೀಯಕ್ಕೆ ಎಂಟ್ರಿಕೊಡುವುದಿಲ್ಲ ಎಂದಿದ್ದರು. ಇದೀಗ ರಾಜಕೀಯ ಎಂಟ್ರಿ ಕುರಿತು ಸ್ವತಃ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಮೋದಿ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಎಂಟ್ರಿಕೊಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಆ ಗಾಳಿ ಸುದ್ದಿಯನ್ನು ಅಪ್ಪು ನಯವಾಗಿಯೇ ತಳ್ಳಿ ಹಾಕಿದ್ದರು. ಆ ಬಳಿಕ ಪುನೀತ್ ಪತ್ನಿ ಅಶ್ವಿನಿ ಪುನೀತ್ ಪುನೀತ್ ರಾಜ್ ಕುಮಾರ್ ರಾಜಕೀಯಕ್ಕೆ ಎಂಟ್ರಿಕೊಡುತ್ತಾರೆ ಎನ್ನಲಾಗುತ್ತಿದೆ. ಆದರೆ ಆ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.
ಇನ್ನೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಈಗಾಗಲೇ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಇದೀಗ ಮತ್ತೆ ಚುನಾವಣೆ ಹತ್ತಿರ ಬಂದಿದ್ದು, ನಟ ಶಿವರಾಜ್ ಕುಮಾರ್ ಹೆಸರು ಕೇಳಿ ಬರುತ್ತಿದೆ. ಈ ಕುರಿತು ಶಿವರಾಜ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ತಮಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲ, ತಾವು ರಾಜಕಾರಣ ಪ್ರವೇಶ ಮಾಡುವುದಿಲ್ಲ ಎಂದಿದ್ದಾರೆ. ಈ ಮೂಲಕ ತಂದೆಯ ಹಾದಿಯಲ್ಲೇ ಹ್ಯಾಟ್ರಿಕ್ ಹೀರೋ ನಡೆಯಲು ಮುಂದಾಗಿದ್ದಾರೆ.