ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಖ್ಯಾತ ನಟಿ ರಂಭಾ ಕಾರು ಟೊರೊಂಟಾದಲ್ಲಿ ಭೀಕರ ಅಪಘಾತಕ್ಕೆ ತುತ್ತಾಗಿದೆ. ಘಟನೆಯಲ್ಲಿ ರಂಭಾ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಂಭೀರವಾಗಿ ಗಾಯಗೊಂಡಿರುವ ರಂಭಾ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಟಿ ರಂಭಾ, ಪತಿ ಇಂದ್ರಕುಮಾರ್ ಪದ್ಮನಾಥನ್ ಹಾಗೂ ಮೂವರು ಮಕ್ಕಳೊಂದಿಗೆ ಕೆನಡಾದ ಒಂಟಾರಿಯೊ ಪ್ರಾಂತ್ಯದ ರಾಜಧಾನಿ ಟೊರೊಂಟೊದಲ್ಲಿ ವಾಸವಾಗಿದ್ದಾರೆ. ಟೊರೊಂಟೊದ ಶಾಲೆಯಲ್ಲಿ ರಂಭಾ ಮಕ್ಕಳು ಓದುತ್ತಿದ್ದು, ಶಾಲೆ ಮುಗಿಸಿಕೊಂಡು ಮಕ್ಕಳನ್ನು ಕರೆತರುವಾಗ ಕಾರು ಅಪಘಾತಕ್ಕೀಡಾಗಿದೆ. ರಂಭಾ ಚಲಾಯಿಸುತ್ತಿದ್ದ ಕಾರು ಬಲ ಬದಿಯಿಂದ ಬಂದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.
ಅಪಘಾತದ ಬಗ್ಗೆ ರಂಭಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದು ಘಟನೆಯ ಕುರಿತು ಬರೆದುಕೊಂಡಿದ್ದಾರೆ. ಮಕ್ಕಳನ್ನು ಶಾಲೆಯಿಂದ ಕರೆತರುವಾಗ ಈ ಅಪಘಾತ ಸಂಭವಿಸಿದೆ. ಕಾರಿನ ಏರ್ಬ್ಯಾಗ್ ತೆಗೆದುಕೊಂಡಿದ್ದರಿಂದ ದೊಡ್ಡ ಮಟ್ಟದ ತೊಂದರೆ ಉಂಟಾಗಿಲ್ಲ. ಕಾರು ಜಖಂಗೊಂಡಿದ್ದು, ಸಶಾಗೆ ಗಾಯಗಳಾಗಿವೆ. ‘ನಮ್ಮ ಕಾರಿಗೆ ಮತ್ತೊಂದು ಕಾರು ಬಂದು ಗುದ್ದಿದೆ. ಎಲ್ಲರೂ ಸೇಫ್ ಆಗಿದ್ದೇವೆ. ಸಶಾ ಆಸ್ಪತ್ರೆಯಲ್ಲೇ ಇದ್ದಾರೆ. ಬ್ಯಾಡ್ ಟೈಮ್. ದಯವಿಟ್ಟು ಪ್ರಾರ್ಥಿಸಿ’ ಎಂದು ರಂಭಾ ಬರೆದುಕೊಂಡಿದ್ದಾರೆ.
100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ರಂಭಾ ತಮ್ಮ ಗ್ಲಾಮರ್ ನಿಂದಲೇ ಸಾಕಷ್ಟು ಖ್ಯಾತಿ ಘಳಿಸಿದ್ದರು. ಕನ್ನಡದಲ್ಲಿ ರವಿಚಂದ್ರನ್ ಸೇರಿದಂತೆ ಇನ್ನೂ ಹಲವು ನಾಯಕರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಅಲ್ಲದೆ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಇನ್ನೂ ಸಾಕಷ್ಟು ಸ್ಟಾರ್ ಹೀರೋಗಳ ಜೊತೆ ರಂಭಾ ನಟಿಸಿದ್ದರು.