ಕತಾರ್: ಈ ಬಾರಿ ಅರಬ್ಬರ ನಾಡಿನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯ ಆರಂಭದಲ್ಲೇ ಆಘಾತಕಾರಿ ಫಲಿತಾಂಶ ಹೊರಬಿದ್ದಿದೆ. ವಿಶ್ವಕಪ್ ಟೂರ್ನಿಯ ಹಾಟ್ ಫೇವರಿಟ್ ಎನಿಸಿಕೊಂಡಿದ್ದ 2 ಬಾರಿ ಚಾಂಪಿಯನ್ ಆಗಿದ್ದ ಅರ್ಜೆಂಟೀನಾ ತಂಡ ಸೌದಿ ಅರೇಬಿಯಾ ವಿರುದ್ಧ 1-2 ಗೋಲುಗಳಿಂದ ಅಚ್ಚರಿಯ ಸೋಲು ಅನುಭವಿಸಿದೆ. ಗೆಲುವಿನ ಸಂಭ್ರಮದಲ್ಲಿರುವ ಸೌದಿ ಅರೇಬಿಯಾದಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ಇಂದು ರಾಷ್ಟ್ರೀಯ ರಜೆ ಘೋಷಿಸಿದೆ.
ಪಂದ್ಯದ ಆರಂಭದಲ್ಲಿ ಸೌದಿಯ ಆಕ್ರಮಣಕಾರಿ ಆಟದ ನಡುವೆಯೂ ಅರ್ಜೆಂಟೀನಾ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. 2 ಬಾರಿ ವಿಶ್ವಕಪ್ ಎತ್ತಿಹಿಡಿದಿದ್ದ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ವಿರುದ್ಧ ಸೌಧಿ ಅರೇಬಿಯಾ 2-1 ಅಂತರದ ಗೋಲುಗಳಿಂದ ಗೆಲುವು ಸಾಧಿಸಿ ಸಂಭ್ರಮಿಸಿದೆ. ಈ ಬೆನ್ನಲ್ಲೇ ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅರ್ಜೆಂಟೀನಾ ವಿರುದ್ಧದ ವಿಜಯವನ್ನು ಆಚರಿಸಲು ಇಂದು (ಬುಧವಾರ) ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿದ್ದಾರೆ.
ಕತಾರ್‌ನ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ತಂಡ ಗೆಲುವಿನ ಫೇವರಿಟ್ ತಂಡವಾಗಿ ಕಾಣಿಸಿಕೊಂಡಿತ್ತು. ಇತ್ತ ಅದ್ಭುತ ಪ್ರದರ್ಶನದ ಮೂಲಕ ಸೌದಿ ಅರೇಬಿಯಾ ಫುಟ್‍ಬಾಲ್ ಅಭಿಮಾನಿಗಳ ಮನಗೆದ್ದಿದೆ. ಪಂದ್ಯದ 10ನೇ ನಿಮಿಷದಲ್ಲಿ ಮೆಸ್ಸಿ ಗೋಲಿನೊಂದಿಗೆ ಅರ್ಜೆಂಟೀನಾಗೆ 1-0 ಮುನ್ನಡೆ ತಂದುಕೊಟ್ಟರು. ಈ ವೇಳೆ ಅಭಿಮಾನಿಗಳು ಫುಟ್‍ಬಾಲ್ ದಿಗ್ಗಜನ ಆಟಕ್ಕೆ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.
ಮೆಸ್ಸಿ 4 ಫಿಫಾ ವಿಶ್ವಕಪ್‌ಗಳಲ್ಲಿ ಗೋಲು ಬಾರಿಸಿದ ಅರ್ಜೆಂಟೀನಾದ ಮೊದಲ ಆಟಗಾರ ಎನಿಸಿಕೊಂಡರು. ಮೆಸ್ಸಿ 2006, 2014, 2018ರಲ್ಲೂ ಗೋಲು ದಾಖಲಿಸಿದ್ದರು. ಈ ಮೊದಲು ಡಿಯಾಗೊ ಮರಡೋನಾ, ಗೇಬ್ರಿಯಲ್ ಬಟಿಸ್ತುತಾ 3 ವಿಶ್ವಕಪ್‌ಗಳಲ್ಲಿ ಗೋಲು ಹೊಡೆದಿದ್ದರು.