ಮೂಡುಬಿದಿರೆ: ಹುಡ್ಕೊ ಕಾಲನಿಯ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಪುರಸಭೆ ಸದಸ್ಯ ಕೊರಗಪ್ಪ ಕಲಾಪದ ಮಧ್ಯೆ ಅಂಗಿ ಕಳಚಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೊರಗಪ್ಪ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಅಧ್ಯಕ್ಷರು ಮಾತನಾಡಿ, ನಿಮ್ಮ ಮೌಖಿಕ ಮನವಿಯ ಮೇರೆಗೆ ನಾನು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಅವರು ಸ್ಥಳಕ್ಕೆ ಹೋಗಿ ಆಗಬೇಕಾದ ಕಾಮಗಾರಿಯ ಬಗ್ಗೆ ಚರ್ಚಿಸಿ ಕ್ರಮ ಜರಗಿಸಲು ಸೂಚಿಸಿರುವುದಾಗಿಯೂ ಯಾವುದೇ ಅನುದಾನ ಕೊರಗಪ್ಪ ಅವರ ವಾರ್ಡ್ ಗೆ ಸಲ್ಲುವಲ್ಲಿ ಬಾಕಿಯಾಗಿಲ್ಲ. ನೀವು ಕೊಟ್ಟ ಅರ್ಜಿ ನನ್ನ ಗಮನಕ್ಕೆ ಕಾರಣಾಂತರಗಳಿಂದ ನನ್ನ ಗಮನಕ್ಕೆ ಬಂದಿಲ್ಲವಾದರೂ ಈ ಕಾಮಗಾರಿಯ ಬಗ್ಗೆ ಅಂದಾಜು ಪಟ್ಟಿ ತಯಾರಿಸಲು ಎಂಜಿನಿಯರ್ ಅವರಿಗೆ ಸೂಚಿಸಿರುತ್ತೇನೆ. ಅಜೆಂಡಾದಲ್ಲಿ ಬಂದಿಲ್ಲ ಎಂಬ ಒಂದೇ ಕಾರಣ ಇರಿಸಿಕೊಂಡು ನೀವು ಈ ರೀತಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು.
ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಮಹಿಳಾ ಸದಸ್ಯರು ಕೂಡ ಇರುವ ಈ ಸಭೆಯಲ್ಲಿ ನೀವು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದು ಸರಿ ಅಲ್ಲ ಎಂದು ಉಪಾಧ್ಯಕ್ಷೆ ಸುಜಾತ ಶಶಿಧರ್ ಹೇಳಿದರು. ಕೊರಗಪ್ಪ ಅವರು ಪ್ರತಿಭಟಿಸಿದ ರೀತಿಯನ್ನು ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ ಸೇರಿಂತೆ ಬಿಜೆಪಿಯ ಬಹುತೇಕ ಸದಸ್ಯರು ಆಕ್ಷೇಪಿಸಿದರು.