ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವತಿಯಿಂದ ನಡೆಯುವ ಆಳ್ವಾಸ್ ಪ್ರಗತಿ -2022′-ಬೃಹತ್ ಉದ್ಯೋಗ ಮೇಳವು ಅಕ್ಟೋಬರ್ 14 ಹಾಗೂ 15ರಂದು
ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ ಎಂದು ಶಿಕ್ಷಣ ಪ್ರತಿಷ್ಟಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದ್ದಾರೆ.
ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಳ್ವಾಸ್ ಶಿಕ್ಷಣ ಪತಿಷ್ಠಾನದ ವತಿಯಿಂದ ಆಯೋಜಿಸಲ್ಪಡುತ್ತಿರುವ ಬೃಹತ್ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ2022’ ಪ್ರಮುಖ ವಲಯಗಳ ಉದ್ಯೋಗ ಅವಕಾಶಗಳೊಂದಿಗೆ ಅಕ್ಟೋಬರ್ 14 ಹಾಗೂ 15ರಂದು ಮೂಡಬಿದಿರೆಯ ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ ನಡೆಯಲಿದೆ. ‘ಆಳ್ವಾಸ್ ಪ್ರಗತಿ’ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 2007ರಿಂದ ಉದ್ಯೋಗ ಮೇಳ ನಡೆಸಿಕೊಂಡು ಬರುತ್ತಿದೆ.ಗ್ರಾಮೀಣ ಭಾಗದ ಮಕ್ಕಳಿಗೆ ಅವಕಾಶಗಳನ್ನು ನೀಡಬೇಕು ಎನ್ನುವ ಉದ್ದೇಶದಿಂದ ಉದ್ಯೋಗ ಮೇಳಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ್ ಎಂದರು.
12ನೇ ಆವೃತ್ತಿಯಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಐಟಿ ಎಸ್ , ಮ್ಯಾನುಫ್ಯಾಕ್ಚರಿಂಗ್, ಹೆಲ್ತ್ ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋ ಮೊಬೈಲ್, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಹೀಗೆ ವಿವಿಧ ಕ್ಷೇತ್ರದ 200ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಪದವಿ, ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಕಲಾ, ವಾಣಿಜ್ಯ , ಮ್ಯಾನೇಜ್ ಮೆಂಟ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ, ಎಸೆಸೆಲ್ಸಿ ಅರ್ಹ ಪ್ರತಿಭಾವಂತರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶವಿದೆ.
ಉದ್ಯೋಗದ ವಿವರಗಳನ್ನು www.alvaspragati.com ನಲ್ಲಿ ಪ್ರಕಟಿಸಲಾಗುವುದು. ಉದ್ಯೋಗಾಂಕ್ಷಿಗಳು https://alvaspragati.com/CandidateRegistrationPage ಮತ್ತು ಕಂಪೆನಿಗಳು https://alvaspragati.com/CompanyRegistrationPage ನಲ್ಲಿ ನೋಂದಣಿ ಮಾಡಬಹುದು. ಅಭ್ಯರ್ಥಿಗಳು 5-10 ಪಾಸ್ ಪೋರ್ಟ್ ಗಾತ್ರದ ಭಾವಚಿತ್ರಗಳು, ಅಂಕಪಟ್ಟಿ ಜೆರಾಕ್ಸ್, ಆನ್ ಲೈನ್ ನೋಂದಣಿ ನಂಬರ್ ಅಥವಾ ಐಡಿ ತರಬೇಕು. ಹೊರಜಿಲ್ಲೆಗಳಿಂದ ಬರುವ ಉದ್ಯೋಗಾಂಕ್ಷಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಅನಿಲ್ ಲೋಬೋ, ಪ್ರಸಾದ್ ಶೆಟ್ಟಿ, ಪದ್ಮನಾಭ ಶೆಣೈ ಉಪಸ್ಥಿತರಿದ್ದರು.