ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಭದ್ರತಾ ಏಜೆನ್ಸಿಗಳು ಮತ್ತು ಸಶಸ್ತ್ರ ಪಡೆಗಳ ಗುಪ್ತಚರ ವಿಭಾಗಗಳ ಮುಖ್ಯಸ್ಥರೊಂದಿಗೆ ನಿನ್ನೆ ಉನ್ನತ ಮಟ್ಟದ ಸಭೆ ನಡೆಸಿದರು.
ಸಭೆಯಲ್ಲಿ ಕೇಂದ್ರೀಯ ಗುಪ್ತಚರ ಸಂಸ್ಥೆಗಳು, ಸಿಎಪಿಎಫ್‍ಗಳು, ಸಶಸ್ತ್ರ ಪಡೆಗಳ ಗುಪ್ತಚರ ವಿಭಾಗಗಳು, ಕಂದಾಯ ಮತ್ತು ಹಣಕಾಸು ಗುಪ್ತಚರ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿಗಳು ಕೂಡ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ದೇಶದಲ್ಲಿ ಚಾಲ್ತಿಯಲ್ಲಿರುವ ಬೆದರಿಕೆ ಪರಿಸ್ಥಿತಿ ಮತ್ತು ಭದ್ರತಾ ಸವಾಲುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಭಯೋತ್ಪಾದನೆ ಮತ್ತು ಜಾಗತಿಕ ಭಯೋತ್ಪಾದಕ ಗುಂಪುಗಳ ನಿರಂತರ ಬೆದರಿಕೆಗಳು, ನಾರ್ಕೋ-ಭಯೋತ್ಪಾದನೆ, ಸಂಘಟಿತ ಅಪರಾಧ-ಭಯೋತ್ಪಾದನೆ ಸಂಬಂಧ, ಸೈಬರ್ ಸ್ಪೇಸ್‍ನ ಅಕ್ರಮ ಬಳಕೆಯನ್ನು ಎತ್ತಿ ಹಿಡಿದ ಗೃಹ ಸಚಿವರು, ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಭದ್ರತಾ ಏಜೆನ್ಸಿಗಳ ನಡುವೆ ಉತ್ತಮ ಸಮನ್ವಯದ ಅಗತ್ಯವನ್ನು ಒತ್ತಿ ಹೇಳಿದರು.
ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿ ನಡೆಯುವ ಪಂಚರಾಜ್ಯ ಚುನಾವಣೆ ವೇಳೆ ಖಲಿಸ್ತಾನಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ. ಚುನಾವಣೆಗೆ ಮುಂಚಿತವಾಗಿ ರಾಜ್ಯಗಳ ಮೇಲೆ ಉಗ್ರರು ದಾಳಿ ನಡೆಸಲು ಸಂಚು ಹಾಕಿದ್ದು, ಚುನಾವಣೆಗೆ ಮುನ್ನ ಈ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಭದ್ರತಾ ಪಡೆಗೆ ಸೂಚನೆ ನೀಡಿದ್ದಾರೆ.
ಪಂಚರಾಜ್ಯಗಳ ಚುನಾವಣೆ ಹತ್ತಿರವಾಗ್ತಿದ್ದಂತೆ ಉಗ್ರರಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಈ ಹಿನ್ನಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಂಚರಾಜ್ಯಗಳ ಪ್ರಮುಖ ನಗರಗಳ ಮೇಲೆ ಹದ್ದಿನ ಕಣ್ಣಿಡುವಂತೆ ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ.