ತುಮಕೂರು: ತುಮಕೂರಿನಲ್ಲಿ ಜ. 28 ರಂದು ವಿಎಚ್ ಪಿ ನಾಯಕ ಶರಣ್ ಪಂಪ್ವೆಲ್ ಮಾಡಿದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನನ್ನು ತುಮಕೂರು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದ್ದು, ಶರಣ್ ಪಂಪ್ವೆಲ್ ಬಂಧಿಸುವ ನಿರ್ಧಾರ ಜಿಲ್ಲಾ ಪೊಲೀಸರಿಗೆ ಬಿಟ್ಟಿದೆ.
ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಫೆ.14ರಂದು ಶರಣ್ ಪಂಪ್‌ವೆಲ್ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿದ್ದು, ಪ್ರಕರಣದ ಗಂಭೀರತೆಯನ್ನು ನಿರ್ಧರಿಸುವುದು ಪೊಲೀಸರೇ ಎಂದು ಹೇಳಿದೆ.
ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಎಚ್‌ಪಿ ಕಾರ್ಯದರ್ಶಿ ಶರಣ್ ಪಂಪ್‌ವೆಲ್ 2002 ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಮರ ಹತ್ಯೆಗಳು ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮುಸ್ಲಿಂ ಯುವಕನ ಹತ್ಯೆಯನ್ನು ಹಿಂದೂಗಳ ಪ್ರದರ್ಶನ ಎಂದು ಪ್ರತಿಪಾದಿಸಿದರು. ಈ ಹಿನ್ನಲೆ ತುಮಕೂರು ನಗರ ಪೊಲೀಸರು, ನಿವಾಸಿ ಸೈಯದ್ ಬುರ್ಹಾನುದ್ದೀನ್ ಎಂಬುವವರ ದೂರಿನ ಆಧಾರದ ಮೇಲೆ ಜನವರಿ 30 ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 ಎ ಅಡಿಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದಾಗಿ ಪ್ರಕರಣ ದಾಖಲಿಸಿದರು.