ವಾಣಿಜ್ಯ ಜಾಹಿರಾತು

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ಹತ್ತು ವರ್ಷಗಳಲ್ಲಿನ ವಿದ್ಯುತ್‌ ಬೇಡಿಕೆ ಮುಂದಿರಿಸಿ ಜಿಲ್ಲೆಯಲ್ಲಿ ಪ್ರಸ್ತಾವನೆಯಲ್ಲಿದ್ದ ಹನ್ನೊಂದು 110 ಕೆವಿ ಸಬ್‌ಸ್ಟೇಷನ್‌ಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ ಸುನಿಲ್‌ ಕುಮಾರ್‌ ತಿಳಿಸಿದರು.

ಸುಳ್ಯ ಅಂಬಟಡ್ಕದ 33/11 ಕೆವಿ ಸಬ್‌ಸ್ಟೇಷನ್‌ ಬಳಿಯಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ವತಿಯಿಂದ ನಿರ್ಮಾಣವಾಗುವ 110/33/11 ಕೆವಿ ವಿದ್ಯುತ್‌ ಸಬ್‌ ಸ್ಟೇಷನ್‌ ಮತ್ತು 110 ಕೆವಿ ಮಾಡಾವು-ಸುಳ್ಯ ವಿದ್ಯುತ್‌ ಪ್ರಸರಣ ಮಾರ್ಗದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ ಸಂಪಾಜೆ, ನಿಂತಿಕಲ್ಲು ಮತ್ತು ಚಾರ್ವಾಕ ಸೇರಿ 3 ಕಡೆ ಹೊಸ 33 ಕೆವಿ ವಿದ್ಯುತ್‌ ಸಬ್‌ಸ್ಟೇಷನ್‌ ನಿರ್ಮಿಸಲಾಗುವುದು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿದ್ದ ಹಲವಾರು ವಿದ್ಯುತ್‌ ಯೋಜನೆಗಳಿಗೆ ಕಳೆದ ಒಂದೂವರೆ ವರ್ಷದಲ್ಲಿ ಮಂಜೂರಾತಿ ನೀಡಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 200 ಸಬ್‌ಸ್ಟೇಷನ್‌ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ಒಂದೂವರೆ ವರ್ಷದ ಹಿಂದೆ ಇಂಧನ ಸಚಿವರಾಗಿ ಸುಳ್ಯಕ್ಕೆ ಬಂದಾಗ ಸುಳ್ಯದ 110 ಕೆವಿ ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ದೊಡ್ಡ ಬೇಡಿಕೆಯಾಗಿತ್ತು. ಈ ಬಗ್ಗೆ ಹಲವಾರು ಬೇಡಿಕೆಗಳು, ಟೀಕೆಗಳು ಬಂದಿದ್ದವು. 110 ಕೆವಿ ಸಬ್‌ ಸ್ಟೇಷನ್‌ ಮಾಡಿಯೇ ಮಾಡುತ್ತೇವೆ ಎಂದು ಅಂದು ಮಾತು ಕೊಟ್ಟಿದ್ದೆ. ಸುಳ್ಯದ ಜನತೆಗೆ ಕೊಟ್ಟ ಆ ಮಾತನ್ನು ಉಳಿಸಿಕೊಂಡಿದ್ದೇವೆ. 110 ಕೆವಿ ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಇದ್ದ ಎಲ್ಲಅಡೆತಡೆಗಳನ್ನೂ ನಿವಾರಿಸಿ, ಅರಣ್ಯ ಇಲಾಖೆಯ ಸಮಸ್ಯೆ ಪರಿಹರಿಸಿ ವಿಶ್ವಾಸದಿಂದ ಗುದ್ದಲಿ ಪೂಜೆ ನೆರವೇರಿಸಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ ಪರಿಹಾರವಾಗಿದೆ. ಅಲ್ಲದೆ ಕುಮ್ಕಿ ಜಮೀನಿನಲ್ಲಿ ಕೃಷಿ ಮಾಡಲು 30 ವರ್ಷಗಳವರೆಗೂ ಗುತ್ತಿಗೆ ನೀಡಲು ಸರಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ, ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ ಕುರುಂಜಿ, ತಹಸೀಲ್ದಾರ್‌ ಅನಿತಾಲಕ್ಷಿ , ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ, ಮೆಸ್ಕಾಂ ಮುಖ್ಯ ಎಂಜಿನಿಯರ್‌ ಪುಷ್ಪಾ, ಅಧೀಕ್ಷಕ ಎಂಜಿನಿಯರ್‌ ಕೃಷ್ಣರಾಜ್‌, ಕೆಪಿಟಿಸಿಎಲ್‌ ಮುಖ್ಯ ಎಂಜಿನಿಯರ್‌ ಮಂಜುನಾಥ ಶ್ಯಾನುಭೋಗ್‌, ಅಧೀಕ್ಷಕ ಎಂಜಿನಿಯರ್‌ ಉಮೇಶ್‌ ಉಪಸ್ಥಿತರಿದ್ದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.