ಬಹುಶಃ ಎಲ್ಲವೂ ಸರಿ ಇದ್ದಿದ್ದರೆ ಇಂದು ನಮ್ಮ ಶಾಲೆಯ ಅಂಗಳದಲ್ಲಿ ಹಬ್ಬದ ವಾತಾವರಣವೇ ಇರುತ್ತಿತ್ತು! ಗುಡ್ಡಗಾಡಿನ ತಪ್ಪಲಿನಲ್ಲಿ ದೇವಮಂದಿರದಂತೆ ನಿಂತಿರುವುದೇ ನಮ್ಮ ಶಾಲೆ ಸ.ಕಿ.ಪ್ರಾ.ಶಾಲೆ ಜನ್ನಾಲು. ಶಾಲೆಯ ಆವರಣದೊಳಗೆ ಕಾಲಿಡುತ್ತಿದ್ದಂತೆ ಮನಸ್ಸಿಗೇನೋ ಮುದ..! ಶಾಲಾ ಪ್ರಾರಂಭೋತ್ಸವ ಎಂದರೆ ಅದೊಂಥರಾ ಹಬ್ಬವೇ ಸರಿ. ಎರಡು ದಿನಗಳ ಮೊದಲೇ ಪೋಷಕರನ್ನೆಲ್ಲ ಕರೆಯಿಸಿ, ಶಾಲೆ ಸ್ವಚ್ಛಗೊಳಿಸಿ, ಕಾರ್ಯಕ್ರಮಕ್ಕೆ ಸಿದ್ಧತೆಯನ್ನು ಮಾಡಿಟ್ಟುಕೊಳ್ಳುತ್ತಿದ್ದೆವು.
ಶಾಲಾ ಪ್ರಾರಂಭೋತ್ಸವದ ನಮ್ಮ ಖುಷಿಯ ನಡುವೆ ಒಂದಿಷ್ಟು ಸೌಲಭ್ಯಗಳಿಗಾಗಿ,ಶಾಲೆಯ ಉಳಿವಿಗಾಗಿ ಶ್ರಮಿಸಿರುವ ಬಾಲಣ್ಣ, ರಾಘು ಅಣ್ಣ, ಅಮೀನಣ್ಣ, ನಿತ್ಯಣ್ಣ ಮತ್ತು ಶಶಿಕಾಂತಣ್ಣ ಇವರಿಗೆಲ್ಲ ಒಂದಿಷ್ಟು ರಗಳೆ ಕೊಟ್ಟು, ಮಕ್ಕಳಿಗಾಗಿ ದೊಡ್ಡ ಬೇಡಿಕೆಯ ಪಟ್ಟಿಯನ್ನೇ ಇಡುತ್ತಿದ್ದೆ. ದಾನಿಗಳು , ಹಳೆವಿದ್ಯಾರ್ಥಿಗಳು, ಪೋಷಕರು ಮತ್ತು ಊರಿನವರ ಸಹಕಾರದೊಂದಿಗೆ ನಾಲ್ಕು ವರ್ಷಗಳ ಶಾಲಾ ಪ್ರಾರಂಭೋತ್ಸವವನ್ನು ಬಲು ಸಂಭ್ರಮದಿಂದಲೇ ನಾವು ಆಚರಿಸಿದ್ದೆವು.
ಮೊದಲ ದಿನವೇ ಮಕ್ಕಳನ್ನು ಖುಷಿಯಾಗಿರಿಸಬೇಕು ಎನ್ನುವ ಕಾರಣಕ್ಕಾಗಿ ಎಸ್.ಡಿ.ಎಮ್.ಸಿ. ಸದಸ್ಯರು ಮತ್ತು ಹಳೆವಿದ್ಯಾರ್ಥಿಗಳು ಶ್ರಮಿಸುತ್ತಿದ್ದರು. ಪಠ್ಯಪುಸ್ತಕ, ಶಾಲಾ ಸಮವಸ್ತ್ರ, ಕ್ರೀಡಾ ಸಮವಸ್ತ್ರ ,ಕಲಿಕಾ ಸಾಮಗ್ರಿಗಳು, ಗುರುತಿನ ಚೀಟಿ, ಕೊಡೆ,ಬ್ಯಾಗ್ ಮುಂತಾದ ಅಗತ್ಯ ವಸ್ತುಗಳನ್ನು ಮಕ್ಕಳಿಗೆ ವಿತರಿಸಲಾಗುತ್ತಿತ್ತು.
ಹೊಸ ನೋಟ್ ಪುಸ್ತಕಗಳ ಸುವಾಸನೆಯ ಕಂಪು, ಬಗೆ ಬಗೆಯ ಬಣ್ಣದ ಪೆನ್ಸಿಲ್, ಬಣ್ಣದ ಕೊಡೆ ಮತ್ತು ಬ್ಯಾಗ್ ಗಳನ್ನು ಹಿಡಿದು ಆ ಪುಟ್ಟ ಮಕ್ಕಳು ಸಂಭ್ರಮಿಸುವುದನ್ನು ನೋಡಿದಾಗ ಅವರ ಕಣ್ಣಲ್ಲಿನ ಬೆಳಕು ದೇವಸ್ಥಾನದ ಮಹಾಪೂಜೆಯ ದೀಪದಾರತಿಯ ಬೆಳಕನ್ನೇ ಹೋಲುವಂತಿರುತ್ತಿತ್ತು. ದೇವರ ಮೂರ್ತಿಯ ಮುಖದ ಪ್ರಸನ್ನತೆಯೇ ಮಕ್ಕಳ ಮುಖದಲ್ಲಿ…!!!
ಎಲ್ಲಾ ವಿದ್ಯಾರ್ಥಿಗಳಿಗೂ ಬಲೂನ್ ಮತ್ತು ಗುಲಾಬಿ ಹೂ ನೀಡಿ ಸ್ವಾಗತಿಸುತ್ತಿದ್ದೆವು. ನಮ್ಮ ಹಳೆಯ ವಿದ್ಯಾರ್ಥಿ ಆಕಾಶ್ ( ಈಗ ಹತ್ತನೆಯ ತರಗತಿ) ನೀಡಿರುವ ಶಾರದೆಯ ಪೋಟೋಗೆ ಪೂಜೆ ಮಾಡಿ ದೀಪ ಬೆಳಗಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಗುತ್ತಿತ್ತು.
ಎಲ್ಲರ ಒಂದಿಷ್ಟು ಶುಭ ಹಾರೈಕೆಗಳ ನಡುವೆಯೇ ಮಧ್ಯಾಹ್ನದ ಊಟಕ್ಕೆ ಭರ್ಜರಿ ತಯಾರಿ ನಡೆಯುತ್ತಿತ್ತು. ಮಕ್ಕಳ ನೆಚ್ಚಿನ ಸಾಕು ದೊಡ್ಡಮ್ಮ ಘಮ ಘಮಿಸುವ ರುಚಿಯಾದ ಪಾಯಸ ಮಾಡಿ ಮಕ್ಕಳಿಗೆ ಬಡಿಸುತ್ತಿದ್ದರು. ಅವರಿಗೆ ಜೊತೆಯಾಗಿ ಕೆಲವು ಪೋಷಕರು ನಿಲ್ಲುತ್ತಿದ್ದರು.ಎಲ್ಲಾ ಸೇರಿ ತಮ್ಮದೇ ಅಡುಗೆ ಮನೆಯೇನೋ ಎಂಬಂತೆ ಪಾತ್ರೆ ತೊಳೆದಿಡೋದು ನೋಡೋಕೆ ಚಂದ… !
ನಂತರದ ಅವಧಿಯಲ್ಲಿ ಮಕ್ಕಳಿಗೆ ತರಗತಿ ಕೋಣೆ, ಅಭ್ಯಾಸ ಪುಸ್ತಕ ಪರಿಚಯ, ವೇಳಾಪಟ್ಟಿ ತಿಳಿಸಿಹೇಳುವುದು ಮುಂದಿನ ಕಲಿಕೆಗೆ ಅವರನ್ನ ಅಣಿಗೊಳಿಸುವುದೇ ನಮಗೆ ಖುಷಿಯ ಕೆಲಸ. ಪುಟ್ಟ ಪುಟ್ಟ ಕೈಗಳ ಹಿಡಿದು ಅಕ್ಷರ ಕಲಿಸುವುದು, ತೊದಲು ನುಡಿಗಳ ತಿದ್ದುತ್ತಾ ಓದಲು ಕಲಿಸುವುದು, ಬಣ್ಣ ಬಣ್ಣದ ವೇಷ ಹಾಕಿ ನಲಿಸುವುದು, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ, ಪ್ರತಿಭಾ ಕಾರಂಜಿಗೆ ಅವರನ್ನ ಸಿದ್ಧಗೊಳಿಸುವುದು. ಪ್ರವಾಸ ಕರೆದೊಯ್ದು ಖುಷಿ ಪಡಿಸುವುದು ವೃತ್ತಿ ಬದುಕಿನ ಅತ್ಯಂತ ಮಧುರ ಕ್ಷಣಗಳು..!
ಧೋ… ಎಂದು ಮಳೆ ಸುರಿಯುವ ದಿನಗಳಲ್ಲಿ, ಗುಡುಗು ಸಿಡಿಲು ಮಿಂಚುಗಳು ಬಂದಾಗ ಮಕ್ಕಳನ್ನೆಲ್ಲ ಒಂದೆಡೆ ಕುಳಿಸಿ ಅವರನ್ನ ಜಾಗೃತೆ ಮಾಡೋದೇ ಹರ ಸಾಹಸವೆನಿಸುತ್ತಿತ್ತು. ಎಲ್ಲಿಯ ತನಕ ಆತ್ಮೀಯತೆ ಎಂದರೆ “ಮಿಸ್ ಹಸಿವಾಗುತ್ತೆ. ಸಾಕು ದೊಡ್ಡಮ್ಮ ಹತ್ತಿರ ಊಟ ಬಡಿಸೋಕೆ ಹೇಳಿ ಅನ್ನೋವಷ್ಟು”. ಸಾಕು ದೊಡ್ಡಮ್ಮ ಶುಚಿ ರುಚಿಯಾಗಿ ಅಡುಗೆ ಮಾಡಿ ಪ್ರೀತಿಯಿಂದ ಅದನ್ನು ಬಡಿಸಿದಾಗ ಮಕ್ಕಳು ಖುಷಿಯಿಂದ ಊಟ ಮಾಡುವುದು ಎಲ್ಲವೂ ಮನಃ ಪಟಲದಲ್ಲಿ ಅಚ್ಚಳಿಯದೆ ಉಳಿದಿವೆ.
ಶಾಲಾ ಕೈ ತೋಟ ರಚಿಸಿ, ನಾವು ಶಿಕ್ಷಕಿಯರು ಮಕ್ಕಳೆಲ್ಲ ಸೇರಿ ಅದರ ಆರೈಕೆ ಮಾಡುವುದು, ಬೆಳೆದ ತರಕಾರಿಗಳನ್ನ ಬಳಸಿ ಅಡುಗೆ ಮಾಡಿದಾಗ ನಾವೇ ಬೆಳೆಸಿದ ತರಕಾರಿ ಎನ್ನುತ್ತಾ ಮಕ್ಕಳು ಹೆಮ್ಮೆಯಿಂದ ಹೇಳೋದು ಎಲ್ಲವೂ ಖುಷಿಯ ನೆನಪುಗಳು.
ಒಮ್ಮೊಮ್ಮೆ ತಾಳ್ಮೆ ಮಿತಿಮೀರಿ ಒಂದು ಪೆಟ್ಟು ಕೊಟ್ಟು ಮನೆಗೆ ಬಂದಾಗ ಮಾರನೇ ದಿನ ಆ ಮಗುವನ್ನ ಮಾತಾಡಿಸೋ ತನಕ ಸಮಾಧಾನವಿರದೆ ಕಳೆದ ಕ್ಷಣಗಳು, ಬಗೆಬಗೆಯ ಹೂ ಹಿಡಿದು ನಿಲ್ತಿದ್ದ ಮಕ್ಕಳು, ಸ್ನೇಹಿತೆಯಾಗಿ ಶಾಲೆಯ ಕೆಲಸಗಳಿಗೆ ಸಹಕಾರ ತೋರಿದ ನೀರಜಾ ಮಿಸ್, ಹಿರಿಯಕ್ಕನಂತೆ ಮಮತೆ ತೋರಿದ ರೂಬಿ ಮಿಸ್, ಅಂಗನವಾಡಿ ಶಿಕ್ಷಕಿಯರಾದ ಜಯಶ್ರೀ ಟೀಚರ್ ಮತ್ತು ಗುಲಾಬಿ ಟೀಚರ್ ಸ್ನೇಹ ಅಂಗನವಾಡಿ ಮಕ್ಕಳ ತುಂಟಾಟ ಮಕ್ಕಳೊಡನೆ ಮಕ್ಕಳಾಗಿ ಕಳೆದ ಕ್ಷಣಗಳು ಇನ್ನೊಮ್ಮೆ ಬರಬಾರದೇ ಅನಿಸುತ್ತೆ.
ಒಮ್ಮೆ ಹೀಗಾಗಿತ್ತು! ಮನೀಶ್ ಅನ್ನೋ ವಿದ್ಯಾರ್ಥಿ ಈಗ ಎರಡನೇ ತರಗತಿ. ಆವಾಗ ಅಂಗನವಾಡಿಯಲ್ಲಿದ್ದ. ನಲಿಕಲಿ ತರಗತಿಯ ಟೇಬಲ್ ಮೇಲೇನೋ ಗೀಚಿದ್ದ. ಸ್ವಲ್ಪ ಜೋರು ಮಾಡಿದ್ದೆ. ಇಡೀ ಅಂಗನವಾಡಿ ಮಕ್ಕಳ ನಡುವೆ ಗುಸು ಗುಸು! ಬೇಬಿ ಮಿಸ್ ಮನೀಶ್ ಗೆ ಹೊಡಿದಿದ್ದಾರೆ ಅಂತ. ಎರಡು ದಿನಗಳ ಕಾಲ ನಮ್ಮ ಶಾಲೆ ಕಡೆ ಬರದೇ ಮುಷ್ಕರ ಮಾಡಿದ್ದ ಆ ಅಂಗನವಾಡಿ ಮಕ್ಕಳ ಮುಗ್ಧತೆಗೆ ಸಾಟಿಯೆಲ್ಲಿ…???ಪುಟ್ಟ ಪುಟ್ಟ ಕೈ , ಪಾದಗಳ, ಮುಗ್ಧ ಮನಸ್ಸುಗಳೊಂದಿಗೆ ಕಳೆದ ನೆನಪುಗಳಂತೂ ಅದ್ಭುತ.
ಈಗ ಮೂರನೇ ತರಗತಿಯಲ್ಲಿ ಓದುತ್ತಿರುವ ಮನೀಶ್ ಒಂದನೇ ತರಗತಿಯಲ್ಲಿದ್ದಾಗ ನಡೆದ ಘಟನೆ ಇದು. ತಾನು ಸಣ್ಣವನಿದ್ದಾಗ ತೆಗೆದ ಪೋಟೋ ತಂದಿದ್ದ. ಅದನ್ನು ತೋರಿಸಲಿಕ್ಕೆ ಅವನಿಗೇಕೋ ಹಿಂಜರಿಕೆ. ಅವನ ಗೆಳತಿ ಶಾಂಭು ಅದನ್ನ ತಂದು ನನ್ನ ಕೈ ಮೇಲಿಟ್ಟು “ಮಿಸ್ ಇದು ಯಾರು ?”ಅಂತ ಕೇಳಿದಾಗ ಆ ಪೋಟೋ ನೋಡಿದೆ. ಮುದ್ದು ಗೊಂಬೆಯ ಹಾಗಿದ್ದ ಮನೀಶ್. “ಎಷ್ಟು ಚಂದ ಇದ್ದಿದ್ದಿ ಮಾರಾಯ ” ಅಂದಾಗ ತನ್ನ ಹಲ್ಲಿಲ್ಲದ ಬಾಯಿ ತೆರೆದು ನಕ್ಕು ಎಲ್ಲಾ ಸ್ನೇಹಿತರನ್ನ ಹೆಮ್ಮೆಯಿಂದ ನೋಡಿದ ಆ ಖುಷಿಯ ಕ್ಷಣ ಇನ್ನೂ ಕಣ್ಣೆದುರಿನಲ್ಲಿದೆ.
ತಂದೆ ತಾಯಿ ಇಬ್ಬರೂ ಇರದ ಗಿರಿಯ ಹುಟ್ಟಿದ ಹಬ್ಬವನ್ನು ನಾವು ಶಾಲೆಯಲ್ಲಿ ಆಚರಿಸಿದಾಗ ಅವನ ಕಣ್ಣುಗಳಲ್ಲಿ ಕಂಡ ಖುಷಿಯ ಬೆಳಕು, ಶಾರದೆ ಎದುರು ಹಚ್ಚಿಟ್ಟ ದೀಪದಂತೆ.!!
ಮಿಸ್ ಗೆ ಆರಾಮಿಲ್ಲ, ಎಲ್ಲಾ ಸುಮ್ನಿರಿ. ಅನ್ನೋ ಆ ಮುಗ್ಧ ಮಕ್ಕಳ ಪ್ರೀತಿಗೆ ಸರಿಸಾಟಿಯೆಲ್ಲಿ?? ಇಂತಹ ಹಲವಾರು ಘಟನೆಗಳಿಗೆ ನಮ್ಮ ಶಾಲೆ ಸಾಕ್ಷಿಯಾಗಿದೆ. ನಮ್ಮ ಮಕ್ಕಳಲ್ಲಿ ಮಾನವೀಯ ಗುಣಗಳಾದ ಪ್ರೀತಿ, ಕರುಣೆ,ಸ್ನೇಹ, ಮಮತೆ ಮತ್ತು ಪರಸ್ಪರ ಸಹಕಾರದ ಭಾವನೆ ಬೆಳೆಸಿದ್ದೇವೆ ಅನ್ನುವ ಸಂತೃಪ್ತ ಭಾವ ನಮಗಿದೆ. ಆ ಪುಟ್ಟ ಮಕ್ಕಳಿಗೆ ತಮ್ಮ ಶಾಲೆಯಲ್ಲಿ ಕಳೆಯೋ ಒಂದೊಂದು ಕ್ಷಣಗಳೂ ಅಮೂಲ್ಯ ಎನ್ನುವ ಅರಿವಿನೊಂದಿಗೆ ನಾವು ಮೂರು ಜನ ಶಿಕ್ಷಕಿಯರು ಅವರೊಂದಿಗೆ ಬೆರೆತಿದ್ದೇವೆ. ಅವರ ಕಣ್ಣುಗಳ ಖುಷಿಯಲ್ಲಿ ನಮ್ಮ ನೋವುಗಳನ್ನು ಮರೆತಿದ್ದೇವೆ.
ಶಾಲೆಗೆ ಸೇರಿದ ಹೊಸತರಲ್ಲಿ ಒಂದು ವರ್ಷ ಪೂರ್ತಿ ಶಾಲೆಗೆ ಹೋಗೋಕೆ ಮತ್ತು ವಾಪಾಸು ಬರೋಕೆ ಜೊತೆಯಾದವರು ನನ್ನ ನೆಚ್ಚಿನ ವಿದ್ಯಾರ್ಥಿಗಳಾದ ಆಹೇಶ್ ಮತ್ತು ವಿಶ್ವಾಸ್. ಊರಿನ ಎಲ್ಲರ ಹೆಸರು, ವಿಶೇಷತೆ ಬಗ್ಗೆ ಹೇಳ್ತಾ (ಕೆಲವೊಮ್ಮೆ ಭೂತ ಪ್ರೇತಗಳ ಕಥೆ ಹೇಳಿ ಹೆದರಿಸಿದ್ದೂ ಉಂಟು) ಊರಿನ ಪರಿಚಯ ಮಾಡಿಸಿದ್ದು ಅವರಿಬ್ಬರು. ಆಕಾಶ್, ಸುಶ್ಮಿತಾ, ಅಜಯ್, ಅಜಿತ್, ದೀಪಕ್, ಮಂಜುನಾಥ್, ತೃಪ್ತಿ, ಶಾಂಭವಿ, ಸ್ವಸ್ತಿಕ್, ಶಶಾಂಕ್ , ಅನ್ನಪೂರ್ಣ, ಗಿರಿಧರ್, ಸಮೀಕ್ಷಾ, ಧನುಷ್, ಗಗನ್, ಪ್ರನವಿ,ಪ್ರಿಯಾ, ರಿತೇಶ್, ಪ್ರೇರಣಾ, ಮನೀಶ್, ಶಾಂಭವಿ, ಸೃಷ್ಠಿ, ಮನೀಶ್, ಆರ್ಯನ್, ತನುಷಾ, ಮಾನ್ಯ, ಸನ್ವಿಕಾ, ರಿತೇಶ್, ಸಮೃದ್ಧಿ… ಜೊತೆಗೆ ಅಂಗನವಾಡಿ ಪುಟಾಣಿಗಳು ಎಲ್ಲರೂ ಸೇರಿ ತಮ್ಮ ತುಂಟಾಟದಿ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನಮ್ಮನ್ನು ಖುಷಿಯಾಗಿರಿಸಿದ ಮಕ್ಕಳು.
ಎಲ್ಲಕ್ಕಿಂತ ಹೆಚ್ಚಾಗಿ ಅಂಗನವಾಡಿ ಮಗು ಅನ್ವಿತಾ, ದೇವರಿಗೆ ಕೈ ಮುಗಿಯುವಾಗ ನಮ್ಮ ಶಾಲೆ ದೊಡ್ಡ ಶಾಲೆ ಬೇಗ ಶುರುವಾಗಲಿ ಅಂತ ಪ್ರಾರ್ಥನೆ ಮಾಡ್ತಾಳೆ ಎಂದು ತಿಳಿದಾಗ ಮಕ್ಕಳಿಗೆ ಶಾಲೆಯ ಬಗೆಗಿನ ಪ್ರೀತಿ, ಅಭಿಮಾನ ನೋಡಿ “ಧನ್ಯ” ಎನಿಸಿದ್ದಂತೂ ಸುಳ್ಳಲ್ಲ.
ಪೋಷಕರೂ ಕೂಡಾ ಮಕ್ಕಳಿಗೆ ಸ್ವ ಇಚ್ಛೆಯಿಂದ ತರಕಾರಿ, ಮೊಟ್ಟೆ, ಬಿಸ್ಕತ್ ಗಳನ್ನು ತಂದುಕೊಡುತ್ತಿದ್ದರು. ಹದಿನೈದು ದಿನಗಳಿಗೊಮ್ಮೆ ಮಕ್ಕಳಿಗೆ ಪಾಯಸ ಮಾಡಿ ಹಾಕಲು ಪೋಷಕರೇ ಸ್ವ ಇಚ್ಛೆಯಿಂದ ಸಾಮಗ್ರಿಗಳನ್ನು ತಂದುಕೊಡುತ್ತಿದ್ದರು. ಹಳೆ ವಿದ್ಯಾರ್ಥಿಗಳೂ ಕೂಡ ಹಾಗೆ ಮಕ್ಕಳಿಗಾಗಿ ಯಾವುದೇ ಬೇಡಿಕೆ ಇಟ್ಟರೂ ಇಲ್ಲವೆನ್ನದೆ ನೆರವೇರಿಸಿ ಕೊಡುತ್ತಿದ್ದರು.
ಇನ್ನು ವಜ್ರಮಹೋತ್ಸವದ ಸಂದರ್ಭದಲ್ಲಂತೂ ನಮ್ಮ ಶಾಲೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಹಿರಿಯ ಹಳೆ ವಿದ್ಯಾರ್ಥಿಗಳು ಕಟ್ಟಿದ ಮಾವಿನೆಲೆಯ ತೋರಣದ ಕಂಬಗಳು ಶಾಲೆಯ ಬಗೆಗೆ ಅವರ ಒಗ್ಗಟ್ಟಿನ ಪ್ರತೀಕವಾಗಿತ್ತು. ಎಲ್ಲಾ ಹಳೆ ವಿದ್ಯಾರ್ಥಿಗಳು ಒಟ್ಟಾಗಿ ಹೆಗಲಿಗೆ ಹೆಗಲು ಕೊಟ್ಟು ಮಾಡಿದ ಕಾರ್ಯಕ್ರಮ ಅದಾಗಿತ್ತು. ಶಾಲೆಯ ಬಗೆಗಿನ ಅವರ ಪ್ರೀತಿಗೆ ನಾವಂತೂ ಆಭಾರಿಯಾಗಿದ್ದ ಕ್ಷಣಗಳವು…!!!
ಬೀಳ್ಕೊಡುಗೆ ಸಮಾರಂಭದಲ್ಲಿ ಪುಟ್ಟ ಮಕ್ಕಳು ತಮ್ಮದೇ ಭಾಷೆಯಲ್ಲಿ ಅನಿಸಿಕೆ ಹೇಳಿ ಅಳುವಾಗ ಮನಸ್ಸಿಗೆ ಬೇಜಾರು ಅನಿಸ್ತಿತ್ತು. ಹತ್ತನೇ ತರಗತಿ ತನಕ ನಾವಿಲ್ಲಿಯೇ ಕಲಿಯೋ ವ್ಯವಸ್ಥೆ ಇರಬೇಕಿತ್ತು ಅಂತ ಆ ಪುಟ್ಟ ಮಕ್ಕಳು ಹೇಳೋವಾಗ ಶಾಲೆಯ ಬಗೆಗಿನ ಅವರ ಪ್ರೀತಿಗೆ ಹೆಮ್ಮೆ ಅನಿಸ್ತಿತ್ತು.
ಕಳೆದ ವರ್ಷದಿಂದ ಈ ಖುಷಿಗಳೆಲ್ಲ ಇಲ್ಲ! ಮಕ್ಕಳ ಜೊತೆಗಿದ್ದು ಅವರಿಗೆ ಕಲಿಸೋ ಅವಕಾಶ ಇಲ್ಲ! ದೂರವೇ ಇದ್ದು ಕಲಿಸೋ ಸ್ಥಿತಿ! ಬರುವ ವರ್ಷ ಮಕ್ಕಳು ಬೇರೆ ಶಾಲೆಗೆ ಆರನೇ ತರಗತಿಗೆ ಹೋಗ್ತಾರೆ, ನಮ್ಮ ಜೊತೆಗಿರಲ್ಲ ಮಕ್ಕಳು ಅನ್ನೋ ತಳಮಳ, ಬಿಕೋ ಎನ್ನುತ್ತಿರುವ ಶಾಲಾ ಮೈದಾನ ಮತ್ತು ತರಗತಿ ಕೋಣೆಗಳು ಮಕ್ಕಳೊಂದಿಗೆ ಕಳೆದ ಖುಷಿಯ ಕ್ಷಣಗಳನ್ನ ಪದೇ ಪದೇ ನೆನಪಿಸುತ್ತೆ. ನಗಾಡಿಕೊಂಡು ಮಾತಾಡಿಕೊಂಡು ಮಕ್ಕಳು ಊಟ ಮಾಡಿಕೊಂಡು ಇರ್ತಿದ್ದ ವರಾಂಡ ಖಾಲಿಯೆನಿಸಿದೆ.
“ಪ್ರತಿಯೊಂದು ದಿನವನ್ನು ಕೊನೆಯ ದಿನ ಎನ್ನುವಂತೆ ಕಳೆಯಬೇಕು” ಎನ್ನುವ ಮಾತು ಸುಳ್ಳಲ್ಲ. ಯಾಕೆಂದರೆ ಮುಂದಿನ ದಿನಗಳು ನಮ್ಮ ನಿರೀಕ್ಷೆಯಂತೆ ಇರೋದಿಲ್ಲ. ಕಳೆದೋಗುವ ಈ ಬದುಕಿನಲ್ಲಿ ಉಳಿಯುವುದೊಂದೇ ನೆನಪುಗಳು. ಆ ನೆನಪುಗಳು ನಮಗೆ ಸಂತೃಪ್ತಿ ಮತ್ತು ಹೆಮ್ಮೆ ತರುವಂತಿರಬೇಕು.
ಮಕ್ಕಳು, ಪೋಷಕರು, ನೀರಜಾ ಮಿಸ್, ರೂಬಿ ಮಿಸ್, ಅಡುಗೆಯವರಾದ ಸಾಕು ಅಕ್ಕ, ಅಂಗನವಾಡಿ ಶಿಕ್ಷಕಿಯರಾದ ಜಯಶ್ರೀ ಟೀಚರ್ ಗುಲಾಬಿ ಟೀಚರ್ ಇವರೆಲ್ಲರ ಜೊತೆಗೆ ಖುಷಿಯಿಂದ ಕಳೆದ ಸಾವಿರ ಸಾವಿರ ಸಂತಸದ ಕ್ಷಣಗಳ ನೆನಪುಗಳಿಗೆ ಸಾಕ್ಷಿಯಾದ ನಮ್ಮ ಹೆಮ್ಮೆಯ ಶಾಲೆ ಇದು. ಮಕ್ಕಳೊಡನೆ ಮಕ್ಕಳಾಗಿ ನಲಿಯುವ ಕಾಲ ಆದಷ್ಟು ಬೇಗ ಬರಲಿ. ಪುಟ್ಟ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಸುಮುಹೂರ್ತ ಒದಗಿ ಬರಲಿ. ಎಸ್.ಡಿ.ಎಮ್.ಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಊರಿನವರು ಮತ್ತು ಇಲಾಖೆಯ ಅಧಿಕಾರಿಗಳ ಸಹಕಾರ ಹೀಗೆಯೇ ಇರಲಿ. ಪ್ರತಿ ಕೆಲಸಕ್ಕೂ ಸ್ಫೂರ್ತಿಯಾಗಿ ನಿಲ್ಲುವ ಮುಖ್ಯಶಿಕ್ಷಕಿ ರೂಬಿ ಟೀಚರ್ ಸಹಕಾರ ನಿರಂತರವಾಗಿರಲಿ…
- ಬೇಬಿ ಕೆ. ಕಿರಿಮಂಜೇಶ್ವರ
ಸಹ ಶಿಕ್ಷಕಿ
ಸ.ಕಿ.ಪ್ರಾ.ಶಾಲೆ ಜನ್ನಾಲು
(‘ಬರಹ ಬದುಕು’ ವಿಭಾಗಕ್ಕೆ ನೀವೂ ಲೇಖನಗಳನ್ನು ಕಳುಹಿಸಬಹುದು. ನೀವು ನಿಮ್ಮ ಬರಹಗಳನ್ನು ನಮ್ಮ ಇ-ಮೈಲ್ ವಿಳಾಸ [email protected] ಗೆ ಕಳುಹಿಸಬಹುದು.)
ಸೊಗಸಾಗಿದೆ ಬರಹ.ಅಭಿನಂದನೆಗಳು