ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಾಜ ಸೇವೆ ಹಾಗೂ ಸಿನಿಮಾ ರಂಗಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಯಿತು. ಅಪ್ಪುಗೆ ಮರಣೋತ್ತರವಾಗಿ ನೀಡಿದ ಪ್ರಶಸ್ತಿಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಹಸ್ತಾಂತರಿಸಿದರು.
ಪುನೀತ್ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಕರ್ನಾಟಕ ಸರ್ಕಾರ, ಅಭಿಮಾನಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು. ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಇದೇ ಭೂಮಿಯಲ್ಲಿ ಹುಟ್ಟಿ ಬನ್ನಿ ಪುನೀತ್ ಎಂದು ಹೇಳಿದರು.
ಮಳೆಯ ನಡುವೆಯೇ ಅಪ್ಪು ಕುರಿತು ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡಿದರು. 67ನೇ ಕನ್ನಡ ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ 7 ಕೋಟಿ ಕನ್ನಡದ ಜನತೆಗೆ ಇಲ್ಲಿಂದಲೇ ನನ್ನ ರಾಜ್ಯೋತ್ಸವದ ಶುಭಾಶಯಗಳು’ ಎನ್ನುವ ಮೂಲಕ ಮಾತು ಆರಂಭಿಸಿದ ರಜನಿಕಾಂತ್ ಸಂಪೂರ್ಣವಾಗಿ ಕನ್ನಡದಲ್ಲೇ ಮಾತನಾಡಿದರು.
ಪುನೀತ್ ಬಗ್ಗೆ ಮಾತನಾಡಿದ ರಜನಿಕಾಂತ್ ಚೆನ್ನೈನಲ್ಲಿ ಮೊದಲ ಭಾರಿಗೆ ಪುನೀತ್ ಅವರನ್ನು ನೋಡಿದೆ. ಶಬರಿಮಲೆಗೆ 1977ರ ಸಂದರ್ಭದಲ್ಲಿ ನಾನು ಅಪ್ಪು ಅವರನ್ನು ನೋಡಿದ್ದು. ಡಾ.ರಾಜ್ ಕುಮಾರ್ ಅವರನ್ನು ಹೊತ್ತುಕೊಂಡು ಬರುತ್ತಿದ್ದರು. ಅಂದು ರಾಜ್ ಕುಮಾರ್ ಕಾಲ ಮೇಲೆ ಕುಳಿತುಕೊಂಡು ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುತ್ತಿದ್ದ ಅಪ್ಪು ಅವರ ಮುಖ ಇಂದಿಗೂ ನನಗೆ ನೆನಪಿದೆ ಎಂದು ರಜನಿಕಾಂತ್ ಹೇಳಿದರು.
ಅಪ್ಪು ನಿಧನರಾದ ಸಂದರ್ಭದಲ್ಲಿ ನಾನು ಅಪರೇಷನ್ ಆಗಿ ಆಸ್ಪತ್ರೆಯಲ್ಲಿದ್ದೆ. ಅಂದು ನಾನು ಬಂದಿದ್ದರು ಅಪ್ಪು ಅವರ ಮುಖ ನೋಡಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಪುನೀತ್ ಅವರ 4 ವರ್ಷದ ಹುಡುಗನಿದ್ದಗ ಇದ್ದ ಮುಖಕ ಇನ್ನೂ ನನ್ನ ಮನದಲ್ಲಿ ಹಾಗೆ ಇದೆ. ಅದು ಹಾಗೆ ಇರಲಿ ಎಂದು ರಜನಿಕಾಂತ್ ಹೇಳಿದರು.
ಪುನೀತ್ ರಾಜ್ಕುಮಾರ್ ಪರವಾಗಿ ಅವರ ಪತ್ನಿ ಅಶ್ವಿನಿ ಅವರು ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಸ್ವೀಕರಿಸಿದರು. ರಜನಿಕಾಂತ್, ಸುಧಾ ಮೂರ್ತಿ, ಜೂನಿಯರ್ ಎನ್ಟಿಆರ್, ಸಿಎಂ ಬೊಮ್ಮಾಯಿ ಅವರು ಜತೆಗೂಡಿ ಈ ಪ್ರಶಸ್ತಿಯನ್ನು ನೀಡಿದರು. ಕರ್ನಾಟಕ ಸರ್ಕಾರಕ್ಕೆ ಮತ್ತು ಬಂದಿರುವ ಗಣ್ಯರಿಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಅವರು ಧನ್ಯವಾದ ತಿಳಿಸಿದರು. ಸಾವಿರಾರು ಅಭಿಮಾನಿಗಳು ಈ ಕ್ಷಣಕ್ಕೆ ಸಾಕ್ಷಿಯಾದರು.