ವಾಣಿಜ್ಯ ಜಾಹಿರಾತು

ಅಸ್ಸಾಂ: ಟೋಕಿಯೋ ಒಲಿಂಪಿಕ್ಸ್-2021ರಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟ ಬಾಕ್ಸರ್ ಲವ್ಲಿನಾ ಬೋರ್ಗ ಹೈನ್ ಅಸ್ಸಾಂ ಪೊಲೀಸ್ ಉಪಾಧೀಕ್ಷಕರಾಗಿ ನೇಮಕಗೊಂಡಿದ್ದಾರೆ.

ಗುವಾಹಟಿಯ ಜನತಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಾಕ್ಸರ್ ಲವ್ಲಿನಾಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇಮಕಾತಿ ಪತ್ರ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು, ‘ಲವ್ಲಿನಾ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ದೇಶದ ಜತೆಗೆ ಅಸ್ಸಾಂ ರಾಜ್ಯದ ಹಿರಿಮೆಯನ್ನೂ ಹೆಚ್ಚಿಸಿದ್ದಾರೆ. ಈ ಸಾಧನೆಯನ್ನು ಗುರುತಿಸಿ ಅವರಿಗೆ ಡಿಎಸ್ ಪಿ ಹುದ್ದೆಯನ್ನು ನೀಡಲಾಗಿದೆ. ಮುಂದಿನ ಕ್ರೀಡಾಕೂಟದಲ್ಲಿಯೂ ಅವರಿಗೆ ಯಶಸ್ಸು ಸಿಗಲಿ’ ಎಂದು ಹಾರೈಸಿದರು.

ಡಿಎಸ್‍ಪಿ ಆಗಿ ನೇಮಕಗೊಂಡಿರುವ ಕುರಿತು ಮಾತನಾಡಿರುವ ಲವ್ಲಿನಾ, ‘ಅಸ್ಸಾಂ ಮತ್ತು ದೇಶಕ್ಕಾಗಿ ಹೆಚ್ಚಿನ ಪದಕಗಳನ್ನು ಗೆಲ್ಲುವುದು ನನ್ನ ಕರ್ತವ್ಯ. ನಾನು ನನ್ನ ತರಬೇತಿಯತ್ತ ಹೆಚ್ಚು ಗಮನ ಹರಿಸುತ್ತೇನೆ. ಬಾಕ್ಸಿಂಗ್ ನಿಂದ ನಿವೃತ್ತಿಯಾದ ಮೇಲೆ ಪೊಲೀಸ್ ಕರ್ತವ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದೇನೆ. ಇಂದಿನಿಂದ ನನ್ನ ಜೀವನದಲ್ಲಿ ಹೊಸ ಜವಾಬ್ದಾರಿ ಬಂದಿದೆ. ನನಗೆ ಈ ಕೆಲಸವನ್ನು ನೀಡಿದ, ಗುರುತರ ಜವಾಬ್ದಾರಿಯನ್ನು ವಹಿಸಿದ ಅಸ್ಸಾಂ ಸರ್ಕಾರಕ್ಕೆ ನಾನು ಕೃತಜ್ಞಳಾಗಿದ್ದೇನೆ’ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 69 ಕೆಜಿ ವಿಭಾಗದಲ್ಲಿ 24 ವರ್ಷದ ಲವ್ಲಿನಾ ಬೋರ್ಗ ಹೈನ್ ಕಂಚಿನ ಪದಕ ಗೆದ್ದಿದ್ದರು. ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಲವ್ಲಿನಾಗೆ ಅಸ್ಸಾ ಸರ್ಕಾರ 1 ಕೋಟಿ ರೂ. ಚೆಕ್ ನೀಡಿತ್ತು. ಜತೆಗೆ ಡಿಎಸ್ ಪಿ ಹುದ್ದೆಯನ್ನು ನೀಡುವ ಭರವಸೆ ನೀಡಿತ್ತು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here