ವಾಣಿಜ್ಯ ಜಾಹಿರಾತು

ಮಣಿಪಾಲ: ತಾಲೂಕಿನ ಬೆಜ್ಜವಳ್ಳಿ ಬಳಿ ಅಕ್ರಮವಾಗಿ ಜಾನುವಾರು ಸಾಗಾಟ ತಡೆಯಲು ಯತ್ನಿಸಿದ ಸಹೋದರರ ಮೇಲೆ ಜಾನುವಾರು ಕಳ್ಳರು ವಾಹನ ಹತ್ತಿಸಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳನ್ನು ಗೃಹಸಚಿವ ಅರಗ ಜ್ಞಾನೇಂದ್ರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರ ಆರೋಗ್ಯ ವಿಚಾರಿಸಿದ ಗೃಹಸಚಿವರು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಕೆಎಂಸಿ ಆಸ್ಪತ್ರೆಯ ವೈದ್ಯರಿಗೆ ಸೂಚನೆ ನೀಡಿದರು.

ಗಾಯಾಳುಗಳಾದ ಶಿವಮೊಗ್ಗ ಪಟ್ಟಣ ಸಮೀಪದ ಕಿತ್ತನಗದ್ದೆ ಗ್ರಾಮದ ಚರಣ್ (24), ಕಿರಣ್ (23) ಅವರು ಗೋವುಗಳ ಸಾಗಾಟ ವಿಷಯ ತಿಳಿದು ಬುಲೆಟ್ ಬೈಕ್‌ನಲ್ಲಿ ಬೆನ್ನಟ್ಟಿದ್ದಾರೆ. ವಿಷಯ ತಿಳಿದ ಜಾನುವಾರು ಕಳ್ಳರು ಬೆಜ್ಜವಳ್ಳಿಯ ಸಮೀಪ ಬೈಕ್ ಸವಾರರ ಮೇಲೆ ವಾಹನ ಚಲಾಯಿಸಿ ಪರಾರಿಯಾಗಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡ ಸಾರ್ವಜನಿಕರು ಘಟನಾ ಸ್ಥಳದಿಂದ ಪರಾರಿಯಾಗುತ್ತಿದ್ದ ಶಿವಮೊಗ್ಗ ನಗರದ ನವೀದ್ (27) ನನ್ನು ಹಿಡಿದು ಮಾಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಗೋವುಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ಮಾಳೂರು ಠಾಣೆ ವಶದಲ್ಲಿದ್ದು, ಪ್ರಕರಣ ದಾಖಲಾಗಿದೆ.

ಘಟನೆ ಬಗ್ಗೆ ಪೇಜಾವರ ಶ್ರೀ ಖಂಡನೆ

ತೀರ್ಥಹಳ್ಳಿಯ ಬೆಜ್ಜವಳ್ಳಿ ಸಮೀಪ ಅಕ್ರಮ ಗೋಸಾಗಾಟವನ್ನು ತಡೆಯಲೆತ್ನಿಸಿದರ ಮೇಲೆ ವಾಹನ ಚಲಾಯಿಸಿ ಮಾರಣಾಂತಿಕ ದುಷ್ಕೃತ್ಯ ನಡೆಸಿರುವ ಘಟನೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಈ ಘಟನೆ ನಿಜಕ್ಕೂ ಖಂಡನೀಯ. ಗೋರಕ್ಷಣೆಯ ಕಾರ್ಯಕ್ಕೆ ಈ ರೀತಿ ಸವಾಲೆಸೆಯುವ ದುರುಳರ ವಿರುದ್ಧ ಸರ್ಕಾರ ಗಂಭೀರ ಕ್ರಮಕೈಗೊಳ್ಳಬೇಕು. ಗೋಹತ್ಯಾ ನಿಷೇಧ ಕಾನೂನು ಕೇವಲ ಜಾರಿಗೆ ತಂದು ಪ್ರಯೋಜನವಿಲ್ಲ. ಅದರ ಪರಿಣಾಮಕಾರಿ ಅನುಷ್ಠಾನ ಆಗಬೇಕು. ಸರ್ಕಾರಗಳು ಈ ಬಗ್ಗೆ ಪೂರ್ಣ ಇಚ್ಛಾಶಕ್ತಿ ತೋರಬೇಕು. ಇತ್ತೀಚಿನ ದಿನಗಳಲ್ಲಂತೂ ಗೋಹತ್ಯೆ, ಗೋಸಾಗಾಟಗಳು ಯಾವುದೇ ಮುಲಾಜಿಲ್ಲದೇ ನಡೆಯುತ್ತಿರುವುದು ತೀರಾ ಆತಂಕಕಾರಿಯಾಗಿದೆ. ಗೋವಿನ ಸಂಕುಲ ಉಳಿಸಲು ಇಡೀ ಸಮಾಜ ಕಂಕಣಬದ್ಧರಾಗಲೇಬೇಕು. ಬೀಡಾಡಿ ದನಗಳನ್ನು ರಕ್ಷಿಸಲು ಸರ್ಕಾರ ತುರ್ತಾಗಿ ಮುಂದಾಗಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ. ಬಿಜ್ಜವಳ್ಳಿ ದುರ್ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ನೋಡಿಕೊಳ್ಳಬೇಕು. ಈ ಕಾರ್ಯಕರ್ತರು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.