ವಾಣಿಜ್ಯ ಜಾಹಿರಾತು

ಆಗಸ್ಟ್ 7ರಂದು ಯಾವ ದಿನವನ್ನು ಆಚರಿಸಲಾಗುತ್ತದೆ. ಇದರ ಹಿನ್ನೆಲೆ ಏನು? ಈ ದಿನದ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ.

ರಾಷ್ಟ್ರೀಯ ಕೈಮಗ್ಗ ದಿನ

ಆಗಸ್ಟ್ 7ನ್ನು ರಾಷ್ಟ್ರೀಯ ಕೈಮಗ್ಗ ದಿನ ಎಂದು ಪರಿಗಣಿಸಲಾಗುತ್ತದೆ. ದೇಶದಲ್ಲಿರುವ ಕೈಮಗ್ಗ ನೇಕಾರರನ್ನು ಗೌರವಿಸಲು ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಆಗಸ್ಟ್ 7ರ 2015ರಂದು ಕೇಂದ್ರ ಸರ್ಕಾರ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸುವ ನಿರ್ಧಾರವನ್ನು ಪ್ರಕಟಿಸಿತು. ಮೊತ್ತ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯದ ಶತಮಾನೋತ್ಸವ ಭವನದಲ್ಲಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಉದ್ಘಾಟಿಸಿದರು.

ಬ್ರಿಟಿಷ್ ಸರ್ಕಾರವು ಬಂಗಾಳವನ್ನು ವಿಭಜಿಸುವುದನ್ನು ವಿರೋಧಿಸಿ ಕೋಲ್ಕತ್ತಾ ಟೌನ್ ಹಾಲ್‌ನಲ್ಲಿ 1905ರಲ್ಲಿ ಆಗಸ್ಟ್ 7ರಂದು ಪ್ರಾರಂಭವಾದ ಸ್ವದೇಶಿ ಚಳುವಳಿಯ ನೆನಪಿಗಾಗಿ ಆಗಸ್ಟ್ 7 ಅನ್ನು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸಲು ಆಯ್ಕೆ ಮಾಡಲಾಯಿತು. ಸ್ವದೇಶಿ ಆಂದೋಲನವು ದೇಶೀಯ ಉತ್ಪನ್ನಗಳು ಮತ್ತು ಉತ್ಪಾದನಾ ಪ್ರಕ್ರಿಯೆಗಳನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿತ್ತು.

1941 ಆಗಸ್ಟ್ 7ರಂದು, ಭಾರತದ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಿಧನರಾದರು. ಠಾಗೋರ್ ಕೇವಲ ಬರಹಗಾರರು ಮಾತ್ರವಲ್ಲದೆ, ಕವಿ, ತತ್ವಜ್ಞಾನಿ, ಶಿಕ್ಷಣತಜ್ಞ ಮತ್ತು ಸಮಾಜ ಸುಧಾರಕರಾಗಿಯೂ ಪ್ರಸಿದ್ಧರಾಗಿದ್ದರು, ರವೀಂದ್ರನಾಥ ಠಾಗೋರ್, ಭಾರತಕ್ಕೆ ಜನ ಗಣ ಮನ ಎಂಬ ರಾಷ್ಟ್ರಗೀತೆಯನ್ನು ಸಂಯೋಜಿಸಿದರು.

1925 ಆಗಸ್ಟ್ 7ರಂದು ಭಾರತ ದೇಶದ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧರಾದ ಡಾ.ಎಂ.ಎಸ್.ಸ್ವಾಮಿನಾಥನ್ ಜನಿಸಿದರು. ‘ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದೆಂದರೆ ವಿದೇಶೀ ರೈತರನ್ನು ಶ್ರೀಮಂತರನ್ನಾಗಿಸುವ ಕೈಂಕರ್ಯ’ ಎಂಬುದು ಸ್ವಾಮಿನಾಥನ್ ಅವರ ಬಲವಾದ ಅಭಿಪ್ರಾಯವಾಗಿತ್ತು. ಡಾ.ಎಂ.ಎಸ್.ಸ್ವಾಮಿನಾಥನ್ ಪ್ರಯತ್ನದಿಂದ 1960ರ ವರ್ಷದಲ್ಲಿ ಕೇವಲ 12 ಮಿಲಿಯನ್ ಟನ್ನುಗಳ ಗೋಧಿ ಉತ್ಪಾದಿಸುತ್ತಿದ್ದ ಭಾರತ ಮುಂದಿನ ದಶಕಗಳಲ್ಲಿ 70 ಮಿಲಿಯನ್ ಟನ್ನುಗಳಿಗೂ ಮೀರಿದ ಉತ್ಪಾದನಾ ಸಾಮರ್ಥ್ಯ ಗಳಿಸಿತು.

ಅಭಿವೃದ್ಧಿಶೀಲ ಪ್ರಯೋಗಶೀಲತೆಯಲ್ಲಿ ತೊಡಗಿಸಿಕೊಂಡ ಸ್ವಾಮಿನಾಥನ್ ಅವರು ವೈಜ್ಞಾನಿಕ ತಳಹದಿಯ ಬೇಸಾಯ ಪದ್ಧತಿಗಳ ಅನುಷ್ಠಾನದಲ್ಲಿ ತಮ್ಮ ಗಮನವನ್ನು ಕೆಂದ್ರೀಕರಿಸಿದರು. ಇದೇ ‘ಹಸಿರು ಕ್ರಾಂತಿ’ ಎಂದು ಹೆಸರು ಪಡೆಯಿತು. ಸ್ವಾಮಿನಾಥನ್ ಅವರಿಗೆ ವಿಶ್ವದಾದ್ಯಂತ ಅನೇಕ ಪ್ರಶಸ್ತಿಗಳು ದೊರೆತವು. ಮ್ಯಾಗ್ಸೇಸೆ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪುರಸ್ಕಾರದಂತಹ ಮಹತ್ವದ ಪ್ರಶಸ್ತಿಗಳಿಗೆ ಸ್ವಾಮಿನಾಥನ್ ಭಾಜನರಾಗಿದ್ದಾರೆ.

1905 ಆಗಸ್ಟ್ 7ರಂದು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಬ್ರಿಟಿಷ್ ವಸ್ತುಗಳನ್ನು ಬಹಿಷ್ಕರಿಸಿತು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.