ವಾಣಿಜ್ಯ ಜಾಹಿರಾತು

ಸಿಡ್ನಿ: ವಿಶ್ವದ ನಂಬರ್ 1 ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಅವರ ಪ್ರವೇಶ ವೀಸಾವನ್ನು ಆಸ್ಟ್ರೇಲಿಯಾ ರದ್ದುಗೊಳಿಸಿದೆ. ಕೋವಿಡ್-19 ವಿರುದ್ಧ ಸಂಪೂರ್ಣವಾಗಿ ಲಸಿಕೆ ಪಡೆದ ಪುರಾವೆಗಳಿಲ್ಲದ ಹೊರತಾಗಿಯೂ ಮೆಲ್ಬರ್ನ್‍ಗೆ ಬಂದಿಳಿದ ಜೊಕೊವಿಕ್ ಅವರ ವೀಸಾವನ್ನು ಆಸ್ಟ್ರೇಲಿಯಾ ರದ್ದು ಮಾಡಿದೆ.

ಆಸ್ಟ್ರೇಲಿಯಾ ಓಪನ್ ಟೆನಿಸ್ ಕ್ರೀಡಾಕೂಟದಲ್ಲಿ ಆಡಲು ಅನುಮತಿ ನೀಡಬೇಕಾಗಿ ಕೋರಿ ಜೊಕೊವಿಕ್ ಸಲ್ಲಿಸಿದ್ದ ಅರ್ಜಿಯನ್ನು ವೈದ್ಯಕೀಯ ಮಂಡಳಿಗಳು ಅನುಮೋದಿಸಿದ್ದವು. ಹೀಗಾಗಿ ಕೂಟದ ಆಯೋಜಕರು ಜೊಕೊವಿಕ್’ಗೆ ಲಸಿಕೆ ವಿನಾಯಿತಿ ನೀಡಿದ್ದರು. ಇದು ಆಸ್ಟ್ರೇಲಿಯಾದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು.

ಸೆರ್ಬಿಯಾ ಆಟಗಾರ ನಿನ್ನೆ ಸಂಜೆ ಮೆಲ್ಬೋರ್ನ್‍ಗೆ ಆಗಮಿಸಿದ್ದರು. ‘ಕೋವಿಡ್-19 ವಿರುದ್ಧದ ಸಂಪೂರ್ಣ ಲಸಿಕೆ ಪಡೆದ ಬಗ್ಗೆ ಪುರಾವೆ ಇಲ್ಲದೇ ಕೂಟದಲ್ಲಿ ಪಾಲ್ಗೊಳ್ಳಲು ವೈದ್ಯಕೀಯ ವಿನಾಯಿತಿ ನೀಡಲಾಗಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಜೊಕೊವಿಕ್ ಸಂಭ್ರಮಿಸಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದಾದ ಬಳಿಕ ಜೊಕೊವಿಕ್ ಅವರ ವೀಸಾವನ್ನು ಆಸ್ಟ್ರೇಲಿಯಾ ರದ್ದು ಮಾಡಿದೆ.

‘ಆಸ್ಟ್ರೇಲಿಯಾಕ್ಕೆ ಪ್ರವೇಶ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಪೂರೈಸಲು ಜೊಕೊವಿಕ್ ವಿಫಲರಾಗಿದ್ದಾರೆ. ಹೀಗಾಗಿ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ’ ಎಂದು ಆಸ್ಟ್ರೇಲಿಯನ್ ಗಡಿ ರಕ್ಷಣಾ ಪಡೆ ಪ್ರಕಟಣೆಯಲ್ಲಿ ತಿಳಿಸಿದೆ. ‘ಪ್ರವೇಶಕ್ಕೆ ಮಾನ್ಯವಾದ ವೀಸಾ ಹೊಂದಿರದ ಅಥವಾ ವೀಸಾ ರದ್ದುಗೊಂಡವರನ್ನು ಮೊದಲಿಗೆ ಬಂಧಿಸಲಾಗುತ್ತದೆ ಮತ್ತು ಆಸ್ಟ್ರೇಲಿಯಾದಿಂದ ಹೊರಗೆ ಕಳುಹಿಸಲಾಗುತ್ತದೆ’ ಎಂದು ಗಡಿ ರಕ್ಷಣಾ ಪಡೆ ತಿಳಿಸಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here