ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ದಿನೇ ದಿನ ಹೆಚ್ಚಾಗುತ್ತಿದೆ. ಕಳೆದ ಎರಡು ವಾರಗಳ ಅಂತರದಲ್ಲಿ ಈ ರೀತಿಯ ಆರು ಪ್ರಕರಣಗಳು ವರದಿಯಾಗಿದ್ದು ಇದೀಗ ಬಸ್ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಅನ್ಯಕೋಮಿನ ಜೋಡಿಯನ್ನು ತಡೆದು ಭಜರಂಗದಳ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ.
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ದಾಸಕೋಡಿಯ ಮುಸ್ಲಿಂ ಯುವಕ ಹಿಂದೂ ಯುವತಿಯ ಜೊತೆ ಪ್ರಯಾಣಿಸುತ್ತಿದ್ದನ್ನು. ಇದಕ್ಕೆ ಭಜರಂಗದಳ ಕಾರ್ಯಕರ್ತರು ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಜರಂಗದಳ ಕಾರ್ಯಕರ್ತರು ಪಂಪ್ ವೆಲ್ ಬಳಿ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯನ್ನು ತಡೆಯಲು ಯತ್ನಿಸಿ ವಿಫಲರಾಗಿದ್ದಾರೆ. ಬಳಿಕ ತಕ್ಷಣವೇ ಕಲ್ಲಡ್ಕದ ಭಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು ಅವರು ಯುವಕ, ಯುವತಿ ಪ್ರಯಾಣಿಸುತ್ತಿದ್ದ ದುರ್ಗಾಂಬ ಬಸ್ ತಡೆದು ಇಬ್ಬರನ್ನೂ ಬಸ್ ನಿಂದ ಕೆಳಗೆ ಇಳಿಸಿದ್ದಾರೆ.
ಈ ವೇಳೆ ಯುವಕ-ಯುವತಿ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಭಜರಂಗದಳ ಕಾರ್ಯಕರ್ತರು ಯುವತಿಗೆ ಬೈದು ಬುದ್ಧಿ ಹೇಳಿದ್ದಾರೆ. ಬಳಿಕ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿದ್ದು ಪ್ರಕರಣ ಠಾಣೆಯ ಮೆಟ್ಟಿಲೇರಿದೆ. ಘಟನೆಯ ಕುರಿತು ಯಾವುದೇ ಪ್ರಕರಣ ದಾಖಲಾದ ಮಾಹಿತಿ ಇಲ್ಲ.