ಮಂಗಳೂರು: ವಿವಾದದ ಕೇಂದ್ರ ಬಿಂದುವಾಗಿದ್ದ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಇದೀಗ ಮತ್ತೆ ವಿವಾದದ ಮೂಲಕ ಸುದ್ದಿಯಾಗಿದೆ. ನೂತನವಾಗಿ ನಿರ್ಮಾಣ ಆಗುತ್ತಿರುವ ಮಾರುಕಟ್ಟೆಯಲ್ಲಿ ಅಧಿಕೃತ ಬೀಫ್ ಸ್ಟಾಲ್‌ಗೆ ನಗರ ಪಾಲಿಕೆ ಅವಕಾಶ ನೀಡಿರುವುದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬ್ರಿಟಿಷರ ಕಾಲದಿಂದ ಇದ್ದ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನವೀಕರಣಗೊಳಿಸಲು ಕಳೆದ ವರ್ಷ ನೆಲಸಮಗೊಳಿಸಲಾಗಿತ್ತು. ಆದರೆ ಈ ವೇಳೆ ಅಲ್ಲಿದ್ದ ಅಂಗಡಿ ಮಾಲಿಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 114 ಕೋಟಿ ರೂ. ವೆಚ್ಚದಲ್ಲಿ ಹೊಸ ಮಾರ್ಕೆಟ್ ಕಾಮಗಾರಿ ಆರಂಭಿಸಿದ್ದು ಅದರ ನೀಲಿ ನಕ್ಷೆ ವಿರೋದಕ್ಕೆ ಕಾರಣವಾಗಿದೆ.
ಹೊಸ ಮಾರುಕಟ್ಟೆಯ ನೀಲಿ ನಕ್ಷೆಯಲ್ಲಿ ಬರೋಬ್ಬರಿ 9 ಬೀಫ್ ಸ್ಟಾಲ್‌ಗಳು ಇರುವುದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಗೋಕಳ್ಳತನ, ಗೋಹತ್ಯೆ, ಅಕ್ರಮ ಕಸಾಯಿಖಾನೆಗಳು ಮಿತಿ ಮೀರಿ ನಡೆಯುತ್ತಿದ್ದು ಇದೀಗ 9 ಬೀಫ್ ಸ್ಟಾರ್ ಆರಂಭಕ್ಕೆ ಮುಂದಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೀಫ್ ಸ್ಟಾರ್ ಮಾಡಿದರೆ ಗೋವುಗಳ ಹತ್ಯೆ ಹಾಗೂ ಕಳ್ಳತನ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇದನ್ನು ಇಲ್ಲಿಯೇ ಕೈ ಬಿಡಬೇಕು. ಒಂದು ವೇಳೆ ಈ ಪ್ರಸ್ತಾವನೆಯನ್ನು ಕೈ ಬಿಡದೆ ಇದ್ದರೆ ತೀವ್ರವಾದ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇದ್ದರೂ, ಸ್ಥಳೀಯ ಶಾಸಕರು ಬಿಜೆಪಿಯವರೇ ಆಗಿದ್ದರೂ, ಗೋ ಹತ್ಯೆ ನಿಷೇಧದ ಬಗ್ಗೆ ಸಾಕಷ್ಟು ಮಾತನಾಡುವ ಬಿಜೆಪಿಗರೇ ಈ ರೀತಿ ಮಾಡಿರುವುದು ಯಾಕೆ ಎನ್ನುವುದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿರ್ಧಾರದಿಂದ ಹಿಂದೆ ಸರಿದು ಬೀಫ್ ಸ್ಟಾಲ್ ಅನ್ನು ಕೈ ಬಿಡಬೇಕೆಂದು ಸ್ಥಳೀಯ ಶಾಸಕ ವೇದವ್ಯಾಸ ಕಾಮತ್‌ಗೆ ವಿಹೆಚ್‌ಪಿ – ಬಜರಂಗದಳ ಮನವಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸುರುವ ವೇದವ್ಯಾಸ್, ಈ ಮಾರುಕಟ್ಟೆ ನನ್ನ ಕ್ಷೇತ್ರದ ಪುರಾತನ ಮಾರುಕಟ್ಟೆ. ಇಲ್ಲಿ ಬೀಪ್ ಸ್ಟಾಲ್ ನಿರ್ಮಾಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಈ ಬಗ್ಗೆ ನಿರ್ಮಾಣ ಆಗಲಿರುವ ಮಾರುಕಟ್ಟೆಯಲ್ಲಿ ಬೀಪ್ ಸ್ಟಾಲ್ ಯೋಜನೆ ಕೈ ಬಿಡದಿದ್ರೆ, ನಾನು ಮುಂದಿನ ದಿನದಲ್ಲಿ ಇದ್ರ ಶಂಕುಸ್ಥಾಪನೆಗೂ ಹೋಗಲ್ಲ ಎಂದಿದ್ದಾರೆ.
ಬೀಫ್ ಸ್ಟಾಲ್ ಅನ್ನು ಕೈಬಿಡುತ್ತಾರೆ ಎನ್ನುವ ನಂಬಿಕೆ ಇದೆ. ಒಂದು ವೇಳೆ ಕೈಬಿಡದೇ ಹೋದರೆ ಉಗ್ರ ಹೋರಾಟದ ಚಿಂತನೆ ನಡೆಸಲು ಹಿಂದೂ ಸಂಘಟನೆಗಳು ತೀರ್ಮಾನಿಸಿದೆ. ಬಿಜೆಪಿ ಆಡಳಿತ ಇರುವ ಪಾಲಿಕೆ ಈ ಬೀಫ್ ಸ್ಟಾಲ್‌ನ ನಿರ್ಧಾರ ಮಾಡಿರುವುದು ಯಾಕೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.