ವಾಣಿಜ್ಯ ಜಾಹಿರಾತು

ಬೆಳ್ತಂಗಡಿ: ಎಸೆಸೆಲ್ಸಿ ವಿದ್ಯಾರ್ಥಿನಿಯೋರ್ವಳು ಪರೀಕ್ಷೆಗೆಂದು ತಾಯಿಯೊಂದಿಗೆ ತೆರಳುತ್ತಿದ್ದ ಸಂದರ್ಭ ಸ್ಕೂಟರ್ ಅಪಘಾತಗೊಂಡು ಗಾಯಗೊಂಡ ಘಟನೆ ಸೋಮವಾರ ನಡೆದಿದ್ದು, ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಆಂಬ್ಯುಲೆನ್ಸ್ ನಲ್ಲಿ ಶಾಲೆಗೆ ಕರೆತಂದು ಮತ್ತೋರ್ವ ವಿದ್ಯಾರ್ಥಿನಿಯ ಸಹಾಯದಿಂದ ಪರೀಕ್ಷೆಗೆ ಹಾಜರಾಗುವಂತೆ ಶಾಲಾ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಸೈಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ, ನಾವೂರು ಗ್ರಾಮದ ಸಂಪಿಂಜಾ ನಿವಾಸಿ ಲಕ್ಷ್ಮಣ -ಮಮತಾ ದಂಪತಿಯ ಪುತ್ರಿ ತನ್ವಿ(15) ಸೋಮವಾರ ಪರೀಕ್ಷೆ ಬರೆಯಲು ತನ್ನ ತಾಯಿ ಮಮತಾ ಜೊತೆ ಸ್ಕೂಟರ್ ನಲ್ಲಿ ಪರೀಕ್ಷಾ ಕೇಂದ್ರವಾದ ಬೆಳ್ತಂಗಡಿ ವಾಣಿ ಕಾಲೇಜ್ ಗೆ ಬರುತ್ತಿದ್ದಾಗ ಲಾಯಿಲದ ಪುತ್ರಬೈಲ್ ಅಂಗನವಾಡಿ ಎದುರು ಸ್ಕೂಟರ್ ಸ್ಕೀಡ್ ಅಗಿ ಪಲ್ಟಿಯಾಗಿದೆ. ಈ ವೇಳೆ ಮಗಳು ತನ್ವಿ ಗಾಯಗೊಂಡಿದ್ದು, ತಕ್ಷಣ ಉಜಿರೆ ಬೆನಕ‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತನ್ವಿಯನ್ನು ಪರೀಕ್ಷಿಸಿದ ವೈದ್ಯರು ಕೈ,ಕಾಲು ಹಾಗೂ ಮುಖಕ್ಕೆ ಗಾಯವಾಗಿದ್ದು ಯಾವುದೇ ಪ್ರಾಣಕ್ಕೆ ಅಪಾಯವಿಲ್ಲ ಎಂದು ತಿಳಿಸಿದ್ದರು.

ಸೋಮವಾರ ತನ್ವಿ ಕೊನೆಯ ವಿಜ್ಞಾನ ಪರೀಕ್ಷೆಗೆ ಬರೆಯಬೇಕಿತ್ತು. ಹಾಗಾಗಿ ತಾಯಿ ಮಮತಾ ಶಾಲಾ ಆಡಳಿತ ಮಂಡಳಿಗೆ ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣ ಆಸ್ಪತ್ರೆಗೆ ಬಂದ ಶಾಲಾ ಮುಖ್ಯಸ್ಥರು, ತನ್ವಿಗೆ ಪರೀಕ್ಷೆ ಬರೆಯಲು ಸಾಧ್ಯವಾಗದೆ ಇರುವುದನ್ನು ಗಮನಿಸಿ ಅದೇ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ದಾಖಲೆಗಳನ್ನು ನೀಡಿ ಆಕೆ ಹೇಳಿದಾಗೆ ಪರೀಕ್ಷೆ ಬರೆಯಲು ಅವಕಾಶ ನೀಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ವಾಣಿ ಕಾಲೇಜಿನ ಪರೀಕ್ಷಾ ಮೇಲ್ವಿಚಾರರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಿಕ್ಷಣ ಇಲಾಖೆ 11:45 ರಿಂದ 2:45 ವರೆಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.

ಇನ್ನು ಉಜಿರೆ ಬೆನಕ ಆಸ್ಪತ್ರೆಯ ಮುಖಸ್ಥರಾದ ಡಾ.ಗೋಪಾಲಕೃಷ್ಣ ತಮ್ಮ ಆಸ್ಪತ್ರೆಯ ಆಂಬುಲೆನ್ಸ್ ನೀಡಿ ಅದರಲ್ಲಿ ನರ್ಸ್ ನಳಿನಾಕ್ಷಿ ಮತ್ತು ಚಾಲಕ ದಿನೇಶ್ ಇಬ್ಬರನ್ನು ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿನಿ ಜೊತೆ ನೋಡಿಕೊಳ್ಳಲು ಕಳುಹಿಸಿದ್ದಾರೆ. ಅದರಂತೆ ಬೆಳಿಗ್ಗೆ11:45 ರಿಂದ 2:45 ಗಂಟೆವರೆಗೆ ನರ್ಸ್ ಮತ್ತು ಆಂಬುಲೆನ್ಸ್ ಇದ್ದು ಪರೀಕ್ಷೆ ಮುಗಿದ ಬಳಿಕ ವಾಪಸ್ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತಂದು ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.

ತನ್ವಿ ಉತ್ತಮ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯಾಗಿದ್ದು ಅದಕ್ಕಾಗಿ ಕೊನೆಯ ಪರೀಕ್ಷೆ ಅಗಿರುವ ಕಾರಣ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಾತಾನಾಡಿ ಸೈಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲೆಯ 9ನೇ ವಿದ್ಯಾರ್ಥಿನಿಯ ಮೂಲಕ ತನ್ವಿ ಸ್ಟಚ್ಚರ್ ನಲ್ಲಿಯೇ ಪರೀಕ್ಷಾ ಕೊಠಡಿಯಲ್ಲಿ ಮಲಗಿಕೊಂಡು ಆಕೆ ಹೇಳಿದ ಹಾಗೆ ಪಕ್ಕದಲ್ಲಿ ಕುಳಿತುಕೊಂಡು ಪರೀಕ್ಷೆ ಬರೆದು ಮುಗಿಸಿದ್ದಾರೆ ಅದಲ್ಲದೆ ಸೈಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿಯವರು ತಾಯಿಯ ಜೊತೆ‌ಯಲ್ಲಿದ್ದರು.

ತನ್ಬಿಯ ಆಸ್ಪತ್ರೆಯ ಚಿಕಿತ್ಸಾ ಖರ್ಚು ವೆಚ್ಚವನ್ನೆಲ್ಲ ಲಾಯಿಲ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಭರಿಸಿದೆ ಎಂದು ತಿಳಿದುಬಂದಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.