ಮಂಗಳೂರು: ಬಿಗ್‌ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಭಾನುವಾರ ಹುಟ್ಟೂರು ಮಂಗಳೂರಿಗೆ ಆಗಮಿಸಿದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಅವರಿಗೆ ಅದ್ಧೂರಿ ಸ್ವಾಗತ ನೀಡಿ ಸ್ವಾಗತಿಸಲಾಯಿತು.
ನೆಹರೂ ಮೈದಾನದ ಬಳಿಯ ಎ.ಬಿ.ಶೆಟ್ಟಿ ವೃತ್ತದಿಂದ ಕುತ್ತಾರುವಿನ ಕೊರಗಜ್ಜನ ಕಟ್ಟೆಯವರೆಗೆ ತೆರೆದ ವಾಹನದಲ್ಲಿ ರೂಪೇಶ್ ಶೆಟ್ಟಿ ಅವರನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಕೈಯಲ್ಲಿ ಬಿಗ್ ಬಾಸ್ ಟ್ರೋಪಿ ಹಿಡಿದು ರೂಪೇಶ್ ಶೆಟ್ಟಿ ಸಂಭ್ರಮಿಸಿದರು. ರೂಪೇಶ್ ಶೆಟ್ಟಿ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟ್ರೆ, ಅಭಿಮಾನಿಗಳು ತಮ್ಮ ವಿವಿಧ ವಾಹನಗಳಲ್ಲಿ ಸಾಗುತ್ತಾ ರೂಪೇಶ್ ಶೆಟ್ಟಿಗೆ ಸಾಥ್ ನೀಡಿದರು.
‘ ಬಿಗ್ ಬಾಸ್ ಟಾಪ್ ಐವರು ಸ್ಪರ್ಧಿಗಳ ಪಟ್ಟಿಯಲ್ಲಿ ಬಂದರೆ ಮೊದಲಿಗೆ ಕುತ್ತಾರುವಿನ ಕೊರಗಜ್ಜನ ಕಟ್ಟೆಗೆ ಬರುವುದಾಗಿ ಹರಕೆ ಹೊತ್ತಿದ್ದೆ. ಇದೀಗ ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದೇನೆ. ಬಿಗ್‌ಬಾಸ್ ಮನೆಯಲ್ಲಿಯೂ ಕೊರಗಜ್ಜನನ್ನೇ ಪ್ರಾರ್ಥಿಸುತ್ತಿದ್ದೆ’ ಎಂದು ರೂಪೇಶ್ ಶೆಟ್ಟಿ ಹೇಳಿದರು. ಬಿಗ್ಬಾಸ್ನಿಂದ ದೊರೆತ ಹಣದಲ್ಲಿ ಅರ್ಧದಷ್ಟನ್ನು ಬಡವರಿಗೆ ಮನೆ ಕಟ್ಟಲು ವಿನಿಯೋಗಿಸುತ್ತೇನೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.