ಉಡುಪಿ: ಕಳೆದ ಕೆಲ ಸಮಯದಿಂದ ನಗರದ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ತಿರುಗುತ್ತ ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದ ಮಾನಸಿಕ ಅಸ್ವಸ್ಥ ಯುವಕ ಇದೀಗ ಸಹಜ ಸ್ಥಿತಿಗೆ ತಲುಪಿದ್ದಾನೆ. ಈ ಹಿನ್ನೆಲೆಯಲ್ಲಿ ಯುವಕನನ್ನು ಆತನ ಕುಟುಂಬಸ್ಥರು ಬಂದು ಕರೆದುಕೊಂಡು ಹೋಗಿದ್ದಾರೆ.
ಫೆಬ್ರವರಿ 19 ರಂದು ಸಮಾಜ ಸೇವಕ ವಿಶು ಶೆಟ್ಟಿ ಅವರು ನಗರ ಠಾಣಾ ಹೆಡ್‌ಕಾನ್ಸ್ಟೇಬಲ್ ಮರಿ ಗೌಡರ ಸಹಾಯದಿಂದ ಯುವಕನನ್ನು ವಶಕ್ಕೆ ಪಡೆದ್ದರು. ಆತನಿಗೆ ಚಿಕಿತ್ಸೆ ಅಗತ್ಯವಿದೆ ಎಂಬುದನ್ನು ಮನಗಂಡು, ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯ ಬಳಿಕ ಯುವಕನ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡು ಬಂದಿದೆ. ಆ ಬಳಿಕ ಈತ ಬಿಹಾರ ಮೂಲದ ಶಕೀಲ್ ( 25) ಎಂದು ಗುರುತಿಸಲಾಗಿದ್ದು, ಈತ ಕಾರ್ಮಿಕನಾಗಿ ಉಡುಪಿಗೆ ಬಂದಿದ್ದು, ಕಳೆದ ಕೆಲವು ದಿನಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಹಾಗಾಗಿ ಕೆಲಸದ ಸ್ಥಳದಿಂದ ಬೇರ್ಪಟ್ಟು ಅಲೆಯುತ್ತಿದ್ದ.
ಆರೋಗ್ಯದಲ್ಲಿ ಸುಧಾರಣೆಯಾದ ಬಳಿಕ ಆತನಿಂದ ಮಾಹಿತಿ ಪಡೆದು, ಯುವಕನ ಹೆತ್ತವರ ಪತ್ತೆಗೆ ವಿಶು ಶೆಟ್ಟಿಯವರು ಮಾಧ್ಯಮದ ಮೂಲಕ ಮನವಿ ಮಾಡಿದ್ದರು. ಪ್ರಸ್ತುತ ಯುವಕನ ಕುಟುಂಬಸ್ಥರು ಪತ್ತೆಯಾಗಿದ್ದು ಯುವಕನ ಸಹೋದರ ಬಿಹಾರದಿಂದ ಉಡುಪಿಗೆ ಬಂದು ಸಹೋದರ ನನ್ನು ಭೇಟಿಯಾಗಿ ಕರೆದುಕೊಂಡು ಹೋಗಿದ್ದಾರೆ.
ಆಸ್ಪತ್ರೆಯ ಸಂಪೂರ್ಣ ಖರ್ಚು ವೆಚ್ಚವನ್ನು ಭರಿಸಿ ಯುವಕನನ್ನು ಬಿಹಾರಕ್ಕೆ ಕರೆದುಕೊಂಡು ಹೋಗಿದ್ದಾರೆ ಆತನ ಸಹೋದರು. ಈ ಹಿಂದೆ ಹೆಚ್ಚಿನ ಪ್ರಕರಣದಲ್ಲಿ ಆಸ್ಪತ್ರೆಯ ವೆಚ್ಚವನ್ನು ವಿಶು ಶೆಟ್ಟಿಯವರೇ ಭರಿಸಿದ್ದು, ಈ ಪ್ರಕರಣದಲ್ಲಿ ಯುವಕನ ಸಹೋದರನೇ ಆಸ್ಪತ್ರೆಯ ವೆಚ್ಚ ವನ್ನು ಭರಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರೈಕೆ ಮಾಡಿದ್ದಕ್ಕೆ ವಿಶು ಶೆಟ್ಟಿ ಯವರಿಗೆ ಯುವಕನ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.