ಭೋಪಾಲ್: ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಅವರ ಟ್ವೀಟ್ ಒಂದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ನವೆಂಬರ್ 17ರಿಂದ ಎಲ್ಲಾ ಸಂಬಂಧಗಳನ್ನು ತ್ಯಜಿಸುತ್ತಿರುವುದಾಗಿ ಉಮಾ ಭಾರತಿ ಘೋಷಿಸಿದ್ದು ಇನ್ನು ಮುಂದೆ ದೀದಿ ಮಾ ಎಂದಷ್ಟೇ ಕರೆಸಿಕೊಳ್ಳುವುದಾಗಿ ಉಮಾ ಭಾರತಿ ಟ್ವೀಟ್ ಮಾಡಿದ್ದಾರೆ.
ಕಳೆದ ಎರಡು ದಿನಗಳಿಂದ ಊಮಾ ಭಾರತಿ 27 ಸರಣಿ ಟ್ವೀಟ್ ಮಾಡಿದ್ದಾರೆ. ರಾಷ್ಟ್ರ ರಾಜಕೀಯದಲ್ಲಿ ಬಿಜೆಪಿ ಅಭಿವೃದ್ಧಿಯ ಗದ್ದುಗೆಗೇರಲು ಹಾಗೂ ರಾಮ ಮಂದಿರ ಚಳಿವಳಿಯಲ್ಲಿ ಮುಂಚೂಣಿಯಲ್ಲಿದ್ದ ನಾಯಕರಲ್ಲಿ ಒಬ್ಬರಾಗಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ರಾಜಕೀಯ ನಿವೃತ್ತಿಯ ಕುರಿತು ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿತ್ತು. ಇದೀಗ ಟ್ವೀಟ್ ಮೂಲಕ ತಾವು ಕುಟುಂಬವನ್ನು ತೊರೆದು ಇಡೀ ವಿಶ್ವವೇ ತಮ್ಮ ಕುಟುಂಬ ಎಂದು ಪರಿಗಣಿಸಲು ಮುಂದಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಉಮಾ ಭಾರತಿ,
“ನನ್ನ ಕುಟುಂಬದ ಸದಸ್ಯರಿಂದ ಎಲ್ಲ ಬಾಂಧವ್ಯಗಳಿಂದಲೂ ಮುಕ್ತಗೊಳ್ಳುತ್ತಿದ್ದೇನೆ ಮತ್ತು 17ರಂದು ನನ್ನನ್ನು ನಾನು ಮುಕ್ತಗೊಳಿಸುತ್ತಿದ್ದೇನೆ. ಇನ್ನು ಮುಂದೆ ನಾನು ಇಡೀ ವಿಶ್ವ ಸಮುದಾಯದ ದೀದಿ ಮಾ. ನನಗೆ ನನ್ನ ವೈಯಕ್ತಿಕ ಕುಟುಂಬ ಇಲ್ಲ” ಎಂದು ಉಮಾ ಭಾರತಿ ಹೇಳಿದ್ದಾರೆ.
“ನನ್ನ ಸನ್ಯಾಸ ದೀಕ್ಷೆಯ 30ನೇ ವರ್ಷದಲ್ಲಿ, ಅವರ ಆದೇಶಗಳನ್ನು ಪಾಲಿಸಬೇಕು ಎಂದು ಕೂಡ ನಾನು ನಿರ್ಧರಿಸಿದ್ದೇನೆ. ಎಲ್ಲ ಮುನಿಗಳ ಸಮ್ಮುಖದಲ್ಲಿ 2022ರ ಮಾರ್ಚ್ 17ರಂದು ಅವರು ಸಾರ್ವಜನಿಕವಾಗಿ ಘೋಷಣೆ ಮೂಲಕ ನನಗೆ ಈ ಸೂಚನೆಗಳನ್ನು ನೀಡಿದ್ದರು” ಎಂದಿದ್ದಾರೆ.
ಅಲ್ಲದೆ ಕೆಲವು ಟ್ವೀಟ್ ಗಳಲ್ಲಿ ಪಕ್ಷದ ಕುರಿತು ಉಮಾ ಭಾರತಿ ಅಸಮಾಧಾನ ಹೊರ ಹಾಕಿದ್ದಾರೆ. “ನನ್ನ ಕುಟುಂಬ, ನನ್ನ ಸಹೋದರರು, ನನ್ನ ಸೋದರಳಿಯಂದಿರು ಮತ್ತು ಸೋದರ ಸೊಸೆಯಂದಿರು ರಾಜಕಾರಣದಲ್ಲಿ ನನಗೆ ಸಾಕಷ್ಟು ಬೆಂಬಲ ನೀಡಿದ್ದರು. ಇದಕ್ಕಾಗಿ ತಮ್ಮ ಜೀವನವನ್ನೂ ತೇದಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡರ ಆಡಳಿತದಲ್ಲಿಯೂ ಸುಳ್ಳು ಪ್ರಕರಣಗಳು, ಕಿರುಕುಳ ಹಾಗೂ ಅನೇಕ ಸಂಕಷ್ಟಗಳನ್ನು ಎದುರಿಸಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದವರಾದ ಜೈನ ಮುನಿ ಆಚಾರ್ಯ ವಿದ್ಯಾಸಾಗರ ಜೀ ಮಹಾರಾಜ್ ಅವರು ಈಗಲೂ ನನಗೆ ಗುರುಗಳು. ಎಲ್ಲಾ ವೈಯಕ್ತಿಕ ಸಂಬಂಧಗಳು ಮತ್ತು ಬಾಂಧವ್ಯಗಳನ್ನು ತ್ಯಜಿಸಲು ಅವರು ನನಗೆ ಆದೇಶಿಸಿದ್ದಾರೆ. ನನ್ನನ್ನು ದೀದಿ ಮಾ ಎಂದೇ ಕರೆಯಬೇಕು. ನನ್ನ ಭಾರತಿ ಹೆಸರನ್ನು ಅರ್ಥಪೂರ್ಣಗೊಳಿಸಲು ಭಾರತದ ಎಲ್ಲಾ ನಾಗರಿಕರು ಇದನ್ನು ಒಪ್ಪಿಕೊಳ್ಳಬೇಕು ಎಂದು ಉಮಾ ಭಾರತಿ ಮನವಿ ಮಾಡಿದ್ದಾರೆ. ಪ್ರಬಲ ಹಿಂದುತ್ವ ಪ್ರತಿಪಾದಕಿಯಾಗಿರುವ ಉಮಾ ಭಾರತಿ ಅವರು ಜೈನ ಧರ್ಮದಲ್ಲಿ ಸನ್ಯಾಸ ದೀಕ್ಷೆ ಪಡೆದುಕೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.