ಬೆಳಗಾವಿ: ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ಅರಸರು ಎಂಬ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಹೇಳಿಕೆಗೆ ಬಿಜೆಪಿ ಶಾಸಕ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಭಾರತ ಎಂಬ ಹೆಸರು ಕೊಟ್ಟಿದ್ದು ಮುಸ್ಲಿಂಮರು ಅಂತ ಹೇಳಿದರು ಅಚ್ಚರಿ ಇಲ್ಲ. ಕೇವಲ ಕೃಷ್ಣ ಮಠ ಮಾತ್ರವಲ್ಲ, ‘ಭಾರತ’ದ ಹೆಸರು ಕೊಟ್ಟಿದ್ದು ಮುಸಲ್ಮಾನರು. ಮುಸಲ್ಮಾನ ದೊರೆಗಳೇ ರಾಮಮಂದಿರ ನಿರ್ಮಾಣ ಮಾಡಿದ್ದು. ಮುಸಲ್ಮಾನ ದೊರೆಗಳೇ ಕಾಶಿ ವಿಶ್ವನಾಥನ ಪ್ರತಿಷ್ಠಾಪನೆ ಮಾಡಿದ್ದು. ಕಾಂಗ್ರೆಸ್ನವರು ಹೀಗೆ ಹೇಳಿದರೂ ನಾವೆಲ್ಲಾ ಅಚ್ಚರಿ ಪಡಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸುಳ್ಳು ಮತ್ತು ಕಾಂಗ್ರೆಸ್ ಒಂದು ನಾಣ್ಯದ 2 ಮುಖಗಳು. ಸುಳ್ಳನ್ನು ಸತ್ಯದ ರೀತಿಯಲ್ಲಿ ಹೇಳುವುದು ಅವರಿಗಿರುವ ಕಾಯಿಲೆ ಎಂದು ಅಸಮಾಧಾನ ಹೊರ ಹಾಕಿದರು.
ಸಿ.ಟಿ.ರವಿ ವಿತರಣೆ ಮಾಡಿದ್ದ ಸೀರೆ ಸುಟ್ಟು ಹಾಕಿದ ವಿಚಾರವಾಗಿ ಮಾತನಾಡಿದ ಅವರು ಅವರೆಲ್ಲಾ ಡ್ರಾಮಾ ಆಡ್ತಾರೆ, ಆ ರೀತಿ ನಾವು ವಿತರಣೆ ಮಾಡುತ್ತಿಲ್ಲ. ಅದೆಲ್ಲ ಕಾಂಗ್ರೆಸ್ನವರ ಹಳೆ ನಾಟಕಕಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮಿಥುನ್ ರೈ ಹೇಳಿಕೆಗೆ ಸಾಕಷ್ಟು ವಿರೋಧವ್ಯಕ್ತವಾಗುತ್ತಿದೆ.
ಕಾಂಗ್ರೆಸ್ ನಾಯಕ ಮಿಥುನ್ ರೈ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಪತ್ರಿಕೆಗಳಲ್ಲಿ ಬಂದಿದ್ದ ವರದಿ ನೋಡಿ ನಾನು ಹೇಳಿಕೆ ನೀಡಿದ್ದೇನೆ. ನಾನು ಸೌಹಾರ್ದಯುತ ಹೇಳಿಕೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಮಿಥುನ್ ರೈ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದದು. ಶ್ರೀಕೃಷ್ಣ ಮಠಕ್ಕೆ 800 ವರ್ಷಗಳ ಇತಿಹಾಸ ಇದೆ. ಹಿಂದೂಗಳಿಗೆ ಅವಮಾನ ಆಗುವಂತಹ ಹೇಳಿಕೆ ನೀಡಿದ್ದಾರೆ. ಮಿಥುನ್ ರೈ ಕೂಡಲೇ ಹಿಂದೂಗಳ ಕ್ಷಮೆ ಕೇಳಬೇಕು ಎಂದು ಮಿಥುನ್ ರೈ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಖಂಡನೆ ವ್ಯಕ್ತಪಡಿಸಿದ್ದಾರೆ.