ಬೆಂಗಳೂರು: ಬೆಂಗಳೂರಿನ ಬಿಎಂಟಿಸಿ ಬಸ್ ಗಳಲ್ಲಿ ಆಗಾಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೆ ಇರುತ್ತದೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದೀಗ ನಿಂತಿದ್ದ ಬಿಎಂಟಿಸಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನಿರ್ವಾಹಕ ಸಜೀವ ದಹನವಾಗಿದ್ದು ಡ್ರೈವರ್ ಪರಾಗಿದ್ದಾನೆ.
ಮುತ್ತಯ್ಯ ಸ್ವಾಮಿ (45) ಮೃತ ಬಿಎಂಟಿಸಿ ಕಂಡೆಕ್ಟರ್. ಹೊತ್ತಿ ಉರಿದ ಬಸ್ ಡಿಪೋ 31ಕ್ಕೆ ಸೇರಿದ್ದಾಗಿದ್ದು, ಮುಂಜಾನೆ 4 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ.
ರಾತ್ರಿ ರೂಟ್ ಮುಗಿಸಿ ಲಿಂಗಧೀರನಹಳ್ಳಿ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕ ಬಸ್‍ನಲ್ಲಿ ಮಲಗಿದ್ದರು. ಮೃತ ಮುತ್ತಯ್ಯ ಸ್ವಾಮಿ ಬಸ್ಸಿನ ಸಿಟ್‍ನಲ್ಲಿಯೇ ಮಲಗಿದ್ದು, ಈ ವೇಳೆ ಬಸ್ಸಿಗೆ ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಮುತ್ತಯ್ಯ ಅವರು ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ.
ಘಟನೆಯ ವೇಳೆ ಚಾಲಕ ಪ್ರಕಾಶ್ ಶೌಚಾಲಯಕ್ಕೆ ಹೋಗಿದ್ದು ಪ್ರಣಾಪಾಯದಿಂದ ಪರಾಗಿದ್ದಾರೆ. ಗದಗ ಜಿಲ್ಲೆಯ ಹಾಲೂರ ಗ್ರಾಮದ ಮುತ್ತಯ್ಯ ಸ್ವಾಮಿ, ಕಳೆದ ಹಲವು ವರ್ಷಗಳಿಂದ ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಬಿಎಂಟಿಸಿಯ 31 ರ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಚಾಲಕ ಪ್ರಕಾಶ್, ರಾತ್ರಿ 10.30ಕ್ಕೆ ರೂಟ್ ಮುಗಿಸಿ ಬಂದಿದ್ದೆವು. ನಾನು ಶೌಚಾಲಯಕ್ಕೆ ತೆರಳಿದ್ದು, ಬೆಳಗ್ಗೆ 4.45 ಕ್ಕೆ ಎದ್ದು ಆಚೆ ಬಂದು ನೋಡಿದಾಗ ಬೆಂಕಿ ಉರಿಯುತ್ತಿತ್ತು. ಈ ವೇಳೆ ಕಂಡಕ್ಟರ್ ಅವರನ್ನು ಆಚೆ ಬರುವಂತೆ ಕಿರುಚಾಡಿದ್ರು, ಪ್ರಯೋಜನವಾಗಲಿಲ್ಲ. ಅವರು ಮಲಗಿದ್ದ ಜಾಗದಲ್ಲೇ ಸುಟ್ಟು ಕರಕಲಾಗಿದ್ದಾರೆ ಎಂದು ಹೇಳಿದರು. ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.