ವಾಣಿಜ್ಯ ಜಾಹಿರಾತು

ಉಡುಪಿ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಪಡಿತರದಲ್ಲಿ ಕುಚ್ಚಲಕ್ಕಿ ನೀಡಲು ಈಗಾಗಲೇ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದ್ದು, ಈ ಸಂಬಂಧ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಾಯಿತು. ರಾಜ್ಯದ ಇತರೆ ಜಿಲ್ಲೆಗಳಿಂದ ಭತ್ತ ಖರೀದಿಗೆ ಅನುಮತಿಗಾಗಿ ಕೇಂದ್ರಕ್ಕೆ ಮತ್ತೆ ಮನವಿ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಭತ್ತ ಸಾಮಾನ್ಯ ದರ 1940 ರೂ ಹಾಗೂ ಗ್ರೇಡ್ ಎ ಭತ್ತಕ್ಕೆ 1960 ರೂ. ದರ ನಿಗದಿಪಡಿಸಿ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಸ್ಥಳೀಯ ಕುಚ್ಚಲಕ್ಕಿ ಪ್ರಭೇದಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮ ತಳಿಗಳನ್ನು ಖರೀದಿಸಿ ಸ್ಥಳೀಯ ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ.

ಕರಾವಳಿಯಲ್ಲಿ ಪಡಿತರದಲ್ಲಿ ವಿತರಿಸಲು ಒಂದು ತಿಂಗಳಿಗೆ ಒಂದು ಲಕ್ಷ ಕ್ವಿಂಟಾಲ್ ಅಕ್ಕಿ ಬೇಕಾಗುತ್ತದೆ. ಅಂದರೆ ವರ್ಷಕ್ಕೆ 12 ಲಕ್ಷ ಕ್ವಿಂಟಾಲ್ ಅಕ್ಕಿ ಅಗತ್ಯತೆ ಇದ್ದು, ಸುಮಾರು 18 ಲಕ್ಷ ಕ್ವಿಂಟಾಲ್ ನಷ್ಟು ಅಕ್ಕಿ ದಾಸ್ತಾನಿರಬೇಕಾಗುತ್ತದೆ. ಎರಡು ಜಿಲ್ಲೆಗಳಲ್ಲಿ ಬೆಳೆಯುವ ಭತ್ತ ಸಾಕಾಗುವುದಿಲ್ಲ. ಹಾಗಾಗಿ ನಮ್ಮ ರಾಜ್ಯದ ವ್ಯಾಪ್ತಿಯೊಳಗೆ ಇತರೆ ಜಿಲ್ಲೆಗಳಿಂದ ಗುಣಮಟ್ಟದ ಅಕ್ಕಿ ಖರೀದಿ ಮಾಡಲು ಸ್ವಲ್ಪ ರಿಯಾಯಿತಿ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಈ ಸಂಬಂಧ ಅನುಮತಿ ಕೋರಿ ಮನವಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇನ್ನು ಸಭೆಯಲ್ಲಿ ಈ ವಾರದೊಳಗೆ ಗಿರಣಿ ಮಾಲಕರ ಸಭೆ ನಡೆಸುವ ಬಗ್ಗೆ , ಜಿಲ್ಲೆಯಲ್ಲಿ ಸಂಸ್ಕರಣಾ ಘಟಕ ಮಾಡಲು ಜಾಗವನ್ನು ಹುಡುಕಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.

ಕರಾವಳಿಗರಿಗೆ ಸಿಹಿಸುದ್ದಿ ! ಇನ್ನು ಮುಂದೆ ಪಡಿತರದಲ್ಲಿ ಸಿಗಲಿದೆ ಕುಚ್ಚಲಕ್ಕಿ-ಕೇಂದ್ರ ಸರಕಾರ ಅನುಮೋದನೆ

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here