ಸೋರೆಕಾಯಿ ಗಂಜಿ ಅತ್ಯಂತ ಆರೋಗ್ಯಕರ ಆಹಾರ ಪದಾರ್ಥಗಳಲ್ಲಿ ಒಂದು. ಈ ಗಂಜಿ ಸೇವನೆಯಿಂದ ದೇಹವನ್ನು ತಂಪಾಗಿ ಇಡುವಲ್ಲಿ ಸಹಕಾರಿಯಾಗಿದೆ. ಸೋರೆಕಾಯಿ ಗಂಜಿಯನ್ನು ಹೆಚ್ಚಾಗಿ ಗರ್ಭಿಣಿಯರಿಗೆ, ಮೊದಲು ಋತಿಮತಿಯಾದ ಹೆಣ್ಣುಮಕ್ಕಳಿಗೆ ಹಾಗೂ ಮದುವೆ ನಿಶ್ಚಯವಾದ ಗಂಡು-ಹೆಣ್ಣು ಮಕ್ಕಳಿಗೆ ಮಾಡಿಕೊಡುತ್ತಾರೆ. ಅಷ್ಟೇ ಅಲ್ಲದೇ ಕೆಲವೊಂದು ಹಬ್ಬದ ಸಂದರ್ಭದಲ್ಲಿಯೂ ಇದನ್ನು ತಯಾರಿಸಲಾಗುತ್ತದೆ. ಹಾಗಿದ್ರೆ ಬನ್ನಿ ಈ ಸೋರೆಕಾಯಿ ಗಂಜಿ ಮಾಡುವುದು ಹೇಗೆ ಅನ್ನುವುದನ್ನು ತಿಳಿದುಕೊಳ್ಳೋಣ.
ಸೋರೆಕಾಯಿ ಗಂಜಿ ಮಾಡಲು ಬೇಕಾಗುವ ಪದಾರ್ಥಗಳು;
ಒಂದು ಸೋರೆಕಾಯಿ,
ದೋಸೆ ಅಕ್ಕಿ
ಒಂದು ಚಮಚ ಮೆಂತ್ಯೆ ಕಾಳು
ತೆಂಗಿನ ಹಾಲು
ಬೆಲ್ಲ
ಒಂದು ಚಿಟಿಕೆ ಉಪ್ಪು,
ತುಪ್ಪ
ಮಾಡುವ ವಿಧಾನ;
ಮೊದಲು ಸೋರೆಕಾಯಿಯನ್ನು ಚೆನ್ನಾಗಿ ತೊಳೆದು ತುರಿದಿಟ್ಟುಕೊಳ್ಳಿ. ಒಂದು ಕುಕ್ಕರ್ ಅಥವಾ ಪಾತ್ರೆಯನ್ನು ತೆಗೆದುಕೊಂಡು ಅದಿಕ್ಕೆ ಒಂದು ಗ್ಲಾಸ್ ದೋಸೆ ಅಕ್ಕಿ, ತುರಿದ ಸೋರೆಕಾಯಿ, ಮೆಂತ್ಯೆ ಕಾಳು ಹಾಕಿ ಅದಿಕ್ಕೆ ಮೂರು ಗ್ಲಾಸ್(ಕುಕ್ಕರ್ ಗೆ ಆದರೆ) ಅಥವಾ ಬೇಕಾದಷ್ಟು ನೀರು ಹಾಕಿ ಬೇಯಿಸಿ. ಬಳಿಕ ಅದಿಕ್ಕೆ ತೆಂಗಿನಕಾಯಿ ಹಾಲನ್ನು ಹಾಕಿ ಕುದಿಸಿ. ನಂತರ ಅದಿಕ್ಕೆ ಬೆಲ್ಲ, ಒಂದು ಚಿಟಿಕೆ ಉಪ್ಪು ಹಾಕಿ ಮಂದ ಆಗುವವರೆಗೆ ಕುದಿಸಿ. ಕೊನೆಗೆ ಏಲಕ್ಕಿ ಪುಡಿ ಮತ್ತು ತುಪ್ಪ(ಬೇಕಿದ್ದಲ್ಲಿ) ಹಾಕಿ ಕಲಸಿದರೆ ಸೋರೆಕಾಯಿ ಗಂಜಿ ಸವಿಯಲು ಸಿದ್ಧ.