ಬ್ರಹ್ಮಾವರ : ಕಳೆದ 10 ದಿನಗಳ ಹಿಂದೆ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಕೆಮ್ಮಣ್ಣು ನಿವಾಸಿ ಪ್ರವೀಣ್ ಎಂಬವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಾರ್ಕೂರಿನ ಕಂಬ್ಳಗದ್ದೆಯಲ್ಲಿ ಮೃತದೇಹ ಕೊಳೆತಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರವೀಣ್ ಅಮೀನ್ ಕೆಮ್ಮಣ್ಣು ಅವರು ಅ.18 ರಂದು ರಾತ್ರಿ ತಮ್ಮ ಗಾಡಿ ಸಮೇತ ಕಾಣೆಯಾಗಿದ್ದರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಕೊಳೆತ ಸ್ಥಿತಿಯಲ್ಲಿ ಪ್ರವೀಣ್ ಅಮೀನ್ ಅವರ ಮೃತದೇಹ ಪತ್ತೆಯಾಗಿದೆ.
ವಿವಾಹಿತನಾಗಿರುವ ಪ್ರವೀಣ್ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಇವರಿಗೆ 5 ವರ್ಷದ ಹೆಣ್ಣುಮಗಳಿದ್ದು, ಪತ್ನಿ, ಹಾಗೂ ಮಗುವಿನಿಂದ ದೂರವಾಗಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಪ್ರವೀಣ್ ಅ.18 ರಂದು ಗಾಡಿ ಸಮೇತ ನಾಪತ್ತೆಯಾಗಿದ್ದರು.
ಅ.18 ರಂದು ರಾತ್ರಿ ಪ್ರವೀಣ್ ಸಹೋದರಿ ತನ್ನ ಮನೆಗೆ ಬರುವಂತೆ ಕರೆದಿದ್ದು, ಬೆಳಿಗ್ಗೆ ಬರುವುದಾಗಿ ತಿಳಿಸಿದ್ದರು. ಆದರೆ ಬೆಳಿಗ್ಗೆ ಮೊಬೈಲ್ ಫೋನ್ ಸ್ವಿಚ್ ಆಫ್ ಆದ ಕಾರಣ ಮನೆಗೆ ಬಂದು ನೋಡಿದಾಗ ಅಲ್ಲಿ ಇರದೇ ಇರುವುದು ಗಮನಕ್ಕೆ ಬಂದಿತ್ತು. ಅಲ್ಲದೇ ಮನೆಯಲ್ಲಿ ಡೆತ್ ನೋಟ್ ಕೂಡಾ ಪತ್ತೆಯಾಗಿತ್ತು.