ವಾಣಿಜ್ಯ ಜಾಹಿರಾತು

 

 

ನಿರ್ಮಲಾ ಸೀತಾರಾಮನ್ ಮಂಡಿಸಿರುವ ಪ್ರಸಕ್ತ ಸರಕಾರದ ಕೊನೆಯ ಪೂರ್ಣಕಾಲಿಕ ಬಜೆಟ್ 2023 ಅತ್ಯುತ್ತಮ ಬಜೆಟ್ ಎನ್ನುವ ಪ್ರಶಂಶೆಗೆ ಪಾತ್ರವಾಗಿದೆ. ಜನಸಾಮಾನ್ಯರು, ಉದ್ಯಮಿಗಳು, ಹಣಕಾಸು ತಜ್ಞರು, ಮಾರುಕಟ್ಟೆ ವಿಶ್ಲೇಷಕರು ಇದೊಂದು ಅಭಿವೃದ್ಧಿ ಪೂರಕ ಬಜೆಟ್ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಸಂಚಿಕೆಯಲ್ಲಿ ಬಜೆಟ್ಟಿನಲ್ಲಿ ಘೋಷಿಸಲಾದ ಯಾವೆಲ್ಲ ಅಂಶಗಳು ಯಾವೆಲ್ಲ ಕಂಪನಿಯ ಷೇರುಗಳ ಮೇಲೆ ಧೀರ್ಘ ಕಾಲಿಕ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗಿದೆ.

ಈ ಸಲದ ಬಜೆಟ್ಟಿನಲ್ಲಿ ಪ್ರವಾಸೋಧ್ಯಮಕ್ಕೆ ವಿಶೇಷ ಒತ್ತು ನೀಡಲಾಗಿದೆ. ರಾಜ್ಯ ಸರಕಾರಗಳು, ಕೇಂದ್ರ ಸರಕಾರ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ಪ್ರವಾಸೋಧ್ಯಮವನ್ನು ಒಂದು ಆಂದೋಲನದಂತೆ ಉತ್ತೇಜಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಪ್ರವಾಸೋಧ್ಯಮ ಕ್ಷೇತ್ರಕ್ಕೆ ಎಷ್ಟು ಹಣವನ್ನು ಮೀಸಲಿಡಲಾಗಿದೆ ಎಂಬುವುದನ್ನು ಬಜೆಟ್ಟಿನಲ್ಲಿ ಸ್ಪಷ್ಟ ಪಡಿಸಿಲ್ಲವಾದರೂ ನವೀನ ವಿಧಾನಗಳ ಮೂಲಕ ಕನಿಷ್ಠ ಐವತ್ತು ಪ್ರವಾಸೋಧ್ಯಮ ತಾಣಗಳನ್ನು ಗುರುತಿಸಿ ಅವುಗಳನ್ನು ಸಂಪೂರ್ಣ ಪ್ಯಾಕೇಜ್ ನಂತೆ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಸ್ಥಳಗಳಲ್ಲಿ ಸುಸಜ್ಜಿತ ರಸ್ತೆ ಸಂಪರ್ಕ, ಆಹಾರ ಬೀದಿಗಳು, ಪ್ರವಾಸಿ ಮಾರ್ಗದರ್ಶಿಗಳು, ಉನ್ನತ ಗುಣಮಟ್ಟದ ಪ್ರವಾಸಿಗರ ಭದ್ರತೆ ಇವೆಲ್ಲ ಇರಲಿವೆ ಎಂದಿದ್ದಾರೆ. ಈ ಎಲ್ಲ ಅಂಶಗಳು ಪ್ರವಾಸೋದ್ಯಮದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ತೊಡಗಿರುವ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಿವೆ. Indian Hotels Ltd, EIH Ltd., Mahindra Holidays & Resorts India Ltd., Lemon Tree Hotels Ltd, Chalet Hotels Ltd., Jubilant Food Works Ltd., Indian Railway Catering & Tourism Corporation Ltd., Delta Corp Ltd., ಮುಂತಾದ ಕಂಪನಿಗಳ ಷೇರುಗಳ ಬೆಲೆಗಳಲ್ಲಿ ಮುಂಬರುವ ದಿನಗಳಲ್ಲಿ ಏರಿಕೆಯಾಗಬಹುದು.

ಇನ್ನು ಕೃಷಿಗೆ ಸಂಬಂಧ ಪಟ್ಟಂತೆ ಅಗ್ರಿ-ಟೆಕ್ ಕಂಪನಿಗಳ ಮತ್ತು ಸ್ಟಾರ್ಟ್-ಅಪ್ ಗಳ ಅಭಿವೃದ್ದಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಯೋಜನೆ‘ ಹಾಗೂ ಕೃಷಿ ವೇಗವರ್ಧಕ ನಿಧಿ‘ಯನ್ನು  ಸ್ಥಾಪಿಸಲಾಗುವುದು ಎಂದು ಘೋಷಿಸಲಾಗಿದೆ. ಇದರ ಮೂಲಕ ಕೃಷಿಗೆ ಸಂಬಂಧಿಸಿದ ಮಾಹಿತಿಯ ವಿನಿಮಯ, ಸುಲಭ ಸಾಲ ಮತ್ತು ವಿಮೆ, ರೈತರ ಸಮಸ್ಯೆಗಳಿಗೆ ಸೂಕ್ತ ಮತ್ತು ತಕ್ಷಣ ಸ್ಪಂದಿಸುವಿಕೆಗೆ ಅನುಕೂಲವಾಗಲಿದೆ ಎಂದೂ ಹಣಕಾಸು ಸಚಿವೆ ತಿಳಿಸಿದ್ದಾರೆ. ಜೊತೆಗೆ ತೋಟಗಾರಿಕಾ ಬೆಳೆಗಳನ್ನು ಉತ್ತೇಜಿಸುವ ಸಲುವಾಗಿ Atmanirbhar Clean Plant ಕಾರ್ಯಕ್ರಮವನ್ನು ಆರಂಭಿಸಲಾಗುವುದು. ಇದಕ್ಕಾಗಿ 2200 ಕೋಟಿ ಹಣವನ್ನು ಮೀಸಲಿರಿಸಲಾಗಿದೆ. ಹಾಗೆಯೇ ಹತ್ತಿ ಮತ್ತು ಸಿರಿ ಧಾನ್ಯಗಳ ಉತ್ಪಾದನೆ ಮತ್ತು ರಫ್ತ್ತು ಮಾಡಲು ವಿಶೇಷ ಒತ್ತು ನೀಡಲಾಗುವುದು. ಇನ್ನು ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂಪಾಯಿಗಳಿಗೆ  ಹೆಚ್ಚಿಸಲಾಗುವುದು. ಮೀನುಗಾರಿಕೆಯ ಅಭಿವೃದ್ಧಿಗೆ ಪಿಎಂ ಮತ್ಸ್ಯ ಸಂಪದ ಯೋಜನೆಯ ಅಡಿಯಲ್ಲಿ ಸುಮಾರು 6000 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುವುದು.  ಈ ಘೋಷಣೆಗಳು ಅಗ್ರಿ – ಟೆಕ್ ಕಂಪನಿಗಳು, ಹತ್ತಿ ಬಟ್ಟೆ ಉತ್ಪಾದಿಸುವ ಕಂಪನಿಗಳು, ಮತ್ಸೋದ್ಯಮದಲ್ಲಿ  ತೊಡಗಿರುವ ಕಂಪನಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಲಿವೆ.  Kaveri Seed Company, India Pesticides Ltd., Avanti Feeds Ltd, Apex Frozen Foods ಇತ್ಯಾದಿ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಹಾಗೆಯೇ ಕೃಷಿ ಯಾಂತ್ರಿಕರಣಕ್ಕೆ ವಿಶೇಷ ಗಮನ ನೀಡಲಾಗಿದೆ. ಕೃಷಿ ಯಂತ್ರೋಪಕರಣಗಳನ್ನು ತಯಾರಿಸುವ ಕಂಪನಿಗಳಾದ Mahindra & Mahindra Ltd., Escorts Kubota Ltd., VST Tillers Tractors Ltd. ಮುಂತಾದವುಗಳ ಷೇರಿನ ಮೌಲ್ಯ ಹೆಚ್ಚಾಗುವ ಸಂಭವವಿದೆ.

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪಿಎಂ ಆವಾಸ್ ಯೋಜನೆಗೆ 79000 ಕೋಟಿ ರೂಪಾಯಿಗಳನ್ನು ಪ್ರಸಕ್ತ ಬಜೆಟಿನಲ್ಲಿ ಮೀಸಲಿರಿಸಲಾಗಿದೆ. ಇದು  ಕಳೆದ ವರ್ಷದ ಬಜೆಟ್ಟಿಗೆ ಹೋಲಿಸಿದರೆ ಶೇ 66 ರಷ್ಟು ಹೆಚ್ಚು. ಅಂದರೆ ಜನರ ವಸತಿ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜೊತೆಗೆ ಈ ವರ್ಷದ ಬಜೆಟ್ಟಿನ ಬಹುಮುಖ್ಯ ಘೋಷಣೆಯೆಂದರೆ ಸರಕಾರದ ಬಂಡವಾಳ ಹೂಡಿಕೆ. ಹಣಕಾಸು ಸಚಿವರು ಮುಂದಿನ ಆರ್ಥಿಕ ವರ್ಷಕ್ಕಾಗಿ ₹10 ಲಕ್ಷ ಕೋಟಿಗಳಲ್ಲಿ ಬಂಡವಾಳ ಹೂಡಿಕೆಯನ್ನು ಘೋಷಿಸಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 33% ಹೆಚ್ಚಾಗಿದೆ. ಇದರಿಂದಾಗಿ ದೇಶದ ರಾಷ್ಟೀಯ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಬಂದರುಗಳು ಮುಂತಾದವುಗಳ ಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಾಗಲಿದೆ. ಇದರಿಂದಾಗಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಕ್ಷಾಂತರ ಮಂದಿಗೆ ಉದ್ಯೋಗ ದೊರೆಯುವ ಅವಕಾಶವಿದೆ. ಇದು ಕಟ್ಟಡ ನಿರ್ಮಾಣ, ರಸ್ತೆ, ಬಂದರು ನಿರ್ಮಾಣ, ಸಿಮೆಂಟ್, ಕಬ್ಬಿಣ ಉತ್ಪಾದಿಸುವ ಕಂಪನಿಗಳಿಗೆ ಹೆಚ್ಚು ಖುಷಿ ನೀಡಿದೆ. ಹಾಗಾಗಿ ಸಹಜವಾಗಿ  Indiabulls Real Estate Ltd., DLF Ltd., Sunteck Realty Ltd., Godrej Properties Ltd., Prestige Estates Projects Ltd., Oberoi Realty Ltd., Phoenix Mills Ltd., Nesco Ltd., Brigade Enterprises Ltd., Sobha Ltd., ACC Ltd., Ambuja Cement, Tata Steel, JSW Steel Larsen & Toubro Ltd., Siemens Ltd., Triveni Engineering & Industries Ltd., Thermax Ltd., CG Power and Industrial Solutions Ltd., Elgi Equipments Ltd. ಇತ್ಯಾದಿ ಕಂಪನಿಗಳ ಷೇರುಗಳು ಹೂಡಿಕೆದಾರರಿಗೆ ಆಕರ್ಷಣೀಯವಾಗಿ ಕಂಡರೆ ಆಶ್ಚರ್ಯವಿಲ್ಲ.

ಭಾರತೀಯ ರೈಲ್ವೆಗೆ ₹2.40 ಲಕ್ಷ ಕೋಟಿಗಳ ದಾಖಲೆಯ ಬಜೆಟ್ ಹಂಚಿಕೆಯನ್ನು ಕೇಂದ್ರ ಬಜೆಟ್ ಪ್ರಸ್ತಾಪಿಸಿದೆ. ಕೇಂದ್ರ ಹಣಕಾಸು ಸಚಿವರ ಪ್ರಕಾರ  ಇದು 2013-14ನೇ ಹಣಕಾಸು ವರ್ಷದಲ್ಲಿ ಮೀಸಲಿಟ್ಟ ಮೊತ್ತಕ್ಕಿಂತ ಒಂಬತ್ತು ಪಟ್ಟು ಹೆಚ್ಚು. ಇದರಲ್ಲಿ ಬಹುಪಾಲು ಮೊತ್ತವನ್ನು ಹೊಸ ಟ್ರ್ಯಾಕ್ ನಿರ್ಮಾಣ, ಟೆಲಿಕಾಂ ಸಂಪರ್ಕ, ರೈಲು ಚಕ್ರ ಮತ್ತು ರೈಲು ಕೋಚುಗಳ ನಿರ್ಮಾಣಕ್ಕೆ ವಿನಿಯೋಗಿಲಾಗುವುದು.  KEC International, Kalpataru Power Transmission, RVNL, IRCON International, Rites, IRCTC, RailTel Corp, Titagarh Wagons, Texmaco Rail, Jupiter Wagons ಮುಂತಾದ ಕಂಪನಿಗಳು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದು ಲೆಕ್ಕಚಾರ.

ಕೇಂದ್ರ ಬಜೆಟ್ 2023 ರಲ್ಲಿ ಇಂಧನ ಪರಿವರ್ತನೆಗೆ ಆದ್ಯತೆಯ ಬಂಡವಾಳ ಹೂಡಿಕೆಯಾಗಿ ₹ 35,000 ಕೋಟಿ ಹಂಚಿಕೆಯನ್ನು ಘೋಷಿಸಲಾಗಿದೆ. ಇದು 2070 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯ ಗುರಿಯನ್ನು ಸಾಧಿಸುವ ಸರ್ಕಾರದ ಉದ್ದೇಶಕ್ಕೆ ಅನುಗುಣವಾಗಿ ಹಂಚಿಕೆಯಾಗಿದೆ. ಇದರ ಹೊರತಾಗಿ ಲಡಾಖ್‌ನಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಾಗಿ ₹ 20,700 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಹಸಿರು ಇಂಧನ ಪ್ರಾಮುಖ್ಯತೆ ಪಡೆಯುತ್ತಿರುವ ಈ ಸಂದರ್ಭದಲ್ಲಿ ಈ ಘೋಷಣೆಗಳು ಮಹತ್ತರವಾಗಿವೆ. ಹಸಿರು ಇಂಧನ ಉದ್ಯಮದಲ್ಲಿ ತೊಡಗಿರುವ ಕಂಪನಿಗಳು ಈ ಸಂದರ್ಭದಲ್ಲಿ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ Adani Green Energy Ltd., JSW Energy Ltd., Inox Green Energy Services Ltd., Suzlon Energy Ltd., Orient Green Power Company Ltd., Sterling and Wilson Renewable Energy Ltd. ಮುಂತಾದ ಕಂಪನಿಗಳ ಷೇರುಗಳ ಬೆಲೆಗಳಲ್ಲಿ ಗಣನೀಯ ಹೆಚ್ಚಳ ಆಗುವ ಸಾಧ್ಯತೆ ಇದೆ.

ಕ್ಯಾಮೆರಾಗಳು, ಬ್ಯಾಟರಿಗಳು, ಇತ್ಯಾದಿಗಳಂತಹ ಮೊಬೈಲ್ ಘಟಕಗಳ ಆಮದು ಮೇಲಿನ ಕಸ್ಟಮ್ಸ್ ಸುಂಕದ ಮೇಲೆ ರಿಲೀಫ್ ಮತ್ತು ಲಿಥಿಯಂ-ಐಯಾನ್ ಬ್ಯಾಟರಿಗಳ ಮೇಲೆ ಇನ್ನೂ ಒಂದು ವರ್ಷಕ್ಕೆ ರಿಯಾಯಿತಿ. ದೂರದರ್ಶನಗಳ ಉತ್ಪಾದನೆಯಲ್ಲಿ ಬಳಸುವ ತೆರೆದ ಕೋಶಗಳ ಮೇಲಿನ ಕಸ್ಟಮ್ಸ್ ಸುಂಕವನ್ನು 2.5% ಕ್ಕೆ ಇಳಿಸಲಾಗಿದೆ. ಇದು ಟೆಲಿವಿಷನ್‌ಗಳಿಗೆ ಬೇಡಿಕೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಜೊತೆಗೆ ವರಮಾನ ತೆರಿಗೆಯ ಮಿತಿಯನ್ನು ಹೆಚ್ಚಿರುವುದರಿಂದ ತೆರಿಗೆದಾರರ ಮೇಲಿನ ಹೊರೆ ಸ್ವಲ್ಪ ಕಡಿಮೆ ಆಗಲಿದ್ದು, ಅವರ ಕೈಯಲ್ಲಿ ಹಣ ಉಳಿತಾಯ ಆಗಲಿದೆ. ಇದರಿಂದಾಗಿ FMCG ವಸ್ತುಗಳಿಗೆ ಬೇಡಿಕೆ ಜಾಸ್ತಿ ಆಗುವ ಸಾಧ್ಯತೆ ಇರುವುದರಿಂದ ಹೂಡಿಕೆದಾರರು FMCG ಕಂಪನಿಗಳ ಷೇರುಗಳ ಮೇಲೂ ನಿಗಾ ವಹಿಸಬಹುದು.

ಸೂಚನೆ – ಈ ಮೇಲಿನ ವಿಶ್ಲೇಷಣೆ ಅಂಕಣಕಾರರ ವೈಯಕ್ತಿಕ ಅಭಿಪ್ರಾಯವಾಗಿದ್ದು ಮೇಲೆ ತಿಳಿಸಿದ ಷೇರುಗಳಲ್ಲಿ ಹೂಡಿಕೆ ಮಾಡುವ ಮೊದಲು ತಮ್ಮ ಹಣಕಾಸಿನ ಸಲಹೆಗಾರರ ಸಲಹೆ ಪಡೆದುಕೊಳ್ಳುವುದು ಸಮಂಜಸವಾಗಿರುತ್ತದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.