ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ 5ನೇ ಬಜೆಟ್ ಮಂಡನೆ ಮಾಡಿದರು. ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‍ನಲ್ಲಿ ಅನೇಕ ವಸ್ತುಗಳ ಮೇಲಿನ ಸುಂಕವನ್ನು ಏರಿಕೆ ಮತ್ತು ಇಳಿಕೆ ಮಾಡಲಾಗಿದೆ.
ಚಿನ್ನ, ಬೆಳ್ಳಿ, ಪ್ಲಾಟಿನಂ ಸಿಗರೇಟ್, ಎಲೆಕ್ಟ್ರಿಕ್ ಕಿಚನ್ ಚಿಮಣಿ, ಹೆಡ್‍ಫೋನ್, ಇಯರ್ ಫೋನ್, ಛತ್ರಿ, , ರಬ್ಬರ್ ಉತ್ಪನ್ನ, ಸ್ಮಾರ್ಟ್ ಮೀಟರ್, ಸೋಲಾರ್ ಸೆಲ್, ಸೋಲಾರ್ ಮೋಡೆಲ್‍ಗಳು, ಎಕ್ಸ್‌ರೇ ಯಂತ್ರ, ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆ ಏರಲಿದ್ದು, ಇವುಗಳ ಮೇಲಿನ ಸುಂಕವನ್ನು ಏರಿಸಲಾಗಿದೆ.
ಕ್ಯಾಮೆರಾ, ಲೆನ್ಸ್, ಮೊಬೈಲ್ ಫೋನ್‍ಗಳು, ಲ್ಯಾಪ್‍ಟಾಪ್, ಫೋನ್ ಚಾರ್ಜರ್, ಟಿವಿ ಪ್ಯಾನಲ್‍ಗಳ ಬಿಡಿಭಾಗಗಳು, ಈಥೈಲ್ ಆಲ್ಕೋಹಾಲ್, ಸಿಗಡಿ ಉತ್ಪನ್ನ, ಇಂಗು, ಕೋಕೋ ಬೀಜಗಳು ಕಡಿಮೆಯಾಗುತ್ತಿವೆ. ಇವುಗಳ ಮೇಲಿನ ಆಮದು ಸುಂಕವನ್ನು ನಿರ್ಮಲಾ ಸೀತಾರಾಮನ್ ಇಳಿಸಿದ್ದಾರೆ.
ಇನ್ನೂ ಮಧ್ಯಮ ವರ್ಗದವರಿಗೆ ಬಜೆಟ್‌ನಲ್ಲಿ ಬಂಪರ್ ಘೋಷಣೆ ಮಾಡಿದ್ದು ವಾರ್ಷಿಕ 7 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿಯನ್ನು ಏರಿಕೆ ಮಾಡಲಾಗಿದೆ.
ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ದಾಖಲೆಯ 3,397.32 ಕೋಟಿ ರೂ. ಮೀಸಲಿಡಲಾಗಿದೆ.
ಈವರೆಗಿನ ಬಜೆಟ್‍ನಲ್ಲಿ ಇಷ್ಟು ದೊಡ್ಡ ಮೊತ್ತದ ಅನುದಾನ ಕ್ರೀಡಾಗೆ ನೀಡಿರಲಿಲ್ಲ. 2023ರ ಏಷ್ಯನ್ ಗೇಮ್ಸ್, ಪ್ಯಾರಿಸ್ ಒಲಿಂಪಿಕ್ಸ್ ಸಿದ್ಧತೆಗಾಗಿ ಹೆಚ್ಚಿನ ಹಣ ಮೀಸಲಿಡಲಾಗಿದ್ದು, ಖೇಲೋ ಇಂಡಿಯಾಗಾಗಿ 1,045 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಬಾರಿಯ ಬಜೆಟ್‍ನಲ್ಲಿ ರಾಷ್ಟ್ರೀಯ ಕ್ರೀಡಾ ಫೆಡರೇಷನ್‍ಗೆ 325 ಕೋಟಿ ರೂ. ನೆರವು ನೀಡಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಈ ಬಾರಿ ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಿಗಾಗಿ 785.52 ಕೋಟಿ ರೂ. ಅನುದಾನ ನೀಡಲಾಗಿದೆ. 2022-2023ನೇ ಸಾಲಿನ ಬಜೆಟ್‍ನಲ್ಲಿ ಕ್ರೀಡೆಗೆ ನೀಡಿದ್ದ ಅನುದಾನ ಈ ಬಾರಿ 358.5 ಕೋಟಿ ರೂ.ಗೆ ಏರಿಕೆ ಕಂಡಿದ್ದು, 2022-2023ನೇ ಸಾಲಿನಲ್ಲಿ 2,757 ಕೋಟಿ ರೂ. ಅನುದಾನ ನೀಡಲಾಗಿತ್ತು.
ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಮಹಾಮಾರಿ ಕೊರೊನಾ ನಂತರ ಶಿಕ್ಷಣ ಕ್ಷೇತ್ರ ಚೇತರಿಸಿಕೊಳ್ಳಲು ಬೇಕಾದ ಕೆಲವು ಅಗತ್ಯ ಅಂಶಗಳನ್ನು ಈ ಬಾರಿ ಬಜೆಟ್‍ನಲ್ಲಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ 2014 ರಿಂದ ಸ್ಥಾಪಿತವಾಗಿರುವ ಅಸ್ತಿತ್ವದಲ್ಲಿರುವ 157 ವೈದ್ಯಕೀಯ ಕಾಲೇಜುಗಳೊಂದಿಗೆ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಮುಂದಿನ 3 ವರ್ಷಗಳಲ್ಲಿ ಕೇಂದ್ರವು 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವ 740 ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ. ಮಕ್ಕಳು ಮತ್ತು ಯುವ ಸಮುದಾಯಕ್ಕಾಗಿ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.