ಮಂಗಳೂರು: ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದು, ಸಹ ಸವಾರನಿಗೆ ಗಂಭೀರ ಗಾಯವಾಗಿರುವ ಘಟನೆ ಇಲ್ಲಿನ ಲೇಡಿಹಿಲ್ ಬಳಿ ನಡೆದಿದೆ.
ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ಸೋಡಾ ಶರಬತ್ತು ವ್ಯಾಪಾರ ನಡೆಸುತ್ತಿದ್ದ ಮುಹಮ್ಮದ್ ಹನೀಫ್ (35) ಮೃತ ದುರ್ದೈವಿ. ಬಂಟ್ವಾಳ ತಾಲ್ಲೂಕಿನ ಮುಹಮ್ಮದ್ ಖಾಸಿಂ ಗಾಯಗೊಂಡದ್ದು ಅವರನ್ನು ನಗರದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮುಹಮ್ಮದ್ ಹನೀಫ್ ಉರ್ವಸ್ಟೋರ್ ಕಡೆಯಿಂದ ಲೇಡಿಹಿಲ್ ಕಡೆಗೆ ಬರುತ್ತಿದ್ದಾಗ ನಾರಾಯಣಗುರು ವೃತ್ತದ ಬಳಿ ನಿಯಮ ಉಲ್ಲಂಘಿಸಿ ಬಂದ ಬಸ್, ಇನ್ನೊಂದು ವಾಹನವನ್ನು ಹಿಂದಿಕ್ಕುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಹಾಗೂ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೂ ಡಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡ ಮುಹಮ್ಮದ್ ಹನೀಫ್ ಸ್ಥಳದಲ್ಲೇ ಕೊನೆಯುಸಿರೆಳೆದರು.
ಈ ಬಗ್ಗೆ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.