ಅಹಮದಾಬಾದ್: ಗುಜರಾತ್‌ನ ಮೊರ್ಬಿಯಲ್ಲಿ ಬ್ರಿಟಿಷರ ಕಾಲದ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಸುಮಾರು 177 ಜನರನ್ನು ರಕ್ಷಿಸಲಾಗಿದ್ದು ನಾಪತ್ತೆಯಾದವರಿಗಾಗಿ ಇನ್ನೂ ಶೋಧಕಾರ್ಯ ನಡೆಸಲಾಗುತ್ತಿದೆ. ಕಾಣೆಯಾದವರ ಪತ್ತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅಥವಾ ಎನ್‌ಡಿಆರ್‌ಎಫ್‌ನ ಐದು ತಂಡಗಳು ಶ್ರಮಿಸುತ್ತಿವೆ. ಸೇನೆ, ನೌಕಾಪಡೆ ಮತ್ತು ವಾಯುಪಡೆ ಕೂಡ ಕಾರ್ಯಾಚರಣೆಗೆ ಕೈಜೋಡಿಸಿವೆ. ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.
Gujarat | Search and rescue operations underway in Morbi where 132 people died after a cable bridge collapsed yesterday. #MorbiBridgeCollapse pic.twitter.com/uTIZiIu8Ps
— ANI (@ANI) October 31, 2022
ರವಿವಾರ ಸಂಜೆ ದುರ್ಘಟನೆ ನಡೆದಿದ್ದು, ಛತ್ ಪೂಜೆಯ ಆಚರಣೆಗಾಗಿ ಸೇತುವೆ ಮೇಲೆ ಜನ ಜಮಾಯಿಸಿದ್ದರು ಎನ್ನಲಾಗಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 500 ಜನರು ತೂಗು ಸೇತುವೆಯ ಮೇಲೆ ಇದ್ದಾಗ ದುರಂತ ಘಟಿಸಿದೆ ಎಂದು ತಿಳಿದುಬಂದಿದೆ. ಪರಿಣಾಮ ಜನರು ಮಚ್ಚು ನದಿಗೆ ಬಿದ್ದಿದ್ದಾರೆ. ಸೇತುವೆ ಕುಸಿದಾಗ, ನೂರಾರು ಜನರು ನದಿಗೆ ಬಿದ್ದಿದ್ದಾರೆ. ಜನರು ಕುಸಿದ ಸೇತುವೆಯ ಕೇಬಲ್‌ಗಳನ್ನು ಹಿಡಿದಿಟ್ಟುಕೊಂಡು ಸುರಕ್ಷಿತವಾಗಿ ನ್ಯಾವಿಗೇಟ್ ಮಾಡಲು ಈಜುತ್ತಿರುವುದನ್ನು ತೋರಿಸುವ ಹಲವಾರು ದೃಶ್ಯಗಳು ಮತ್ತು ವೀಡಿಯೊಗಳು ವೈರಲ್ ಆಗಿವೆ. ವಡೋದರಾದಿಂದ 300 ಕಿಮೀ ದೂರದಲ್ಲಿರುವ 150 ವರ್ಷಗಳಷ್ಟು ಹಳೆಯದಾದ ಸೇತುವೆ ಇದಾಗಿದ್ದು , ದುರಸ್ತಿಗಾಗಿ ಏಳು ತಿಂಗಳಿನಿಂದ ಮುಚ್ಚಲಾಗಿತ್ತು. ಗುಜರಾತಿ ಹೊಸ ವರ್ಷದ ಅಕ್ಟೋಬರ್ 26 ರಂದು ಇದನ್ನು ಸಾರ್ವಜನಿಕರಿಗೆ ಪುನಃ ತೆರೆಯಲಾಗಿತ್ತು. ಸೇತುವೆ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಸೇತುವೆ ಕುಸಿತವಾಗಿದೆ ಎಂದು ಹೇಳಲಾಗಿದೆ.
ಘಟನೆಯ ಬಗ್ಗೆ ಪ್ರಧಾನಿ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ನಿನ್ನೆಯಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಕೇಂದ್ರವು ರಾಜ್ಯಕ್ಕೆ ಎಲ್ಲಾ ಸಹಾಯವನ್ನು ನೀಡುತ್ತಿದೆ ಎಂದು ಹೇಳಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹ 4 ಲಕ್ಷ ಹಾಗೂ ಗಾಯಗೊಂಡವರಿಗೆ ₹ 50 ಸಾವಿರ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಸಂತ್ರಸ್ತರ ಕುಟುಂಬಗಳಿಗೆ ತಲಾ ₹ 2 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ.
ಈ ಪ್ರಕರಣದಲ್ಲಿ ಮೊಕದ್ದಮೆ ದಾಖಲಿಸಲಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.ಸೇತುವೆ ನವೀಕರಣ ಕಾಮಗಾರಿಯಲ್ಲಿ ಆಗಿರುವ ಲೋಪ ಪತ್ತೆಗೆ ಐವರು ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.