ನವದೆಹಲಿ: ದೇಶದಲ್ಲಿ ಡೆಂಗ್ಯೂ ಪ್ರಕರಣಗಳು ದಿಢೀರ್ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಒಂಭತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ತಜ್ಞರ ತಂಡಗಳನ್ನು ಕಳುಹಿಸಿಕೊಟ್ಟಿದೆ.
ಡೆಂಗ್ಯೂ ಹರಡುವಿಕೆಯನ್ನು ತಡೆಗಟ್ಟಲು, ಸಾರ್ವಜನಿಕರಿಗೆ ಆರೋಗ್ಯ ಕ್ರಮಗಳು, ತಾಂತ್ರಿಕ ಮಾರ್ಗದರ್ಶನಗಳನ್ನು ಒದಗಿಸಲು ಈ ತಂಡಗಳನ್ನು ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.
ದೆಹಲಿ, ಹರಿಯಾಣ, ಪಂಜಾಬ್, ಕೇರಳ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ, ಉತ್ತರಾಖಂಡ್, ಜಮ್ಮುಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.
ದೆಹಲಿಯಲ್ಲಿ ಈ ವರ್ಷ 1530ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿವೆ ಎಂದು ತಿಳಿದುಬಂದಿದೆ. ಇದರಲ್ಲಿ ಸುಮಾರು 1200 ಪ್ರಕರಣಗಳು ಅಕ್ಟೋಬರ್ ತಿಂಗಳೊಂದರಲ್ಲೇ ದಾಖಲಾಗಿರುವುದಾಗಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲಿ ದಾಖಲಾಗಿರುವ ಅತ್ಯಧಿಕ ಪ್ರಕರಣವಾಗಿದೆ. ದೆಹಲಿಯಲ್ಲಿ 2017ರ ಅಕ್ಟೋಬರ್ ತಿಂಗಳಲ್ಲಿ 2022 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದವು. ಅದಾದ ಮೇಲೆ ಇದೇ ಮೊದಲ ಬಾರಿಗೆ ಒಂದೇ ತಿಂಗಳಲ್ಲಿ 1200 ಜನರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ.
ಡೆಂಗ್ಯೂ ಪ್ರಕರಣಗಳ ಪ್ರಮಾಣ ದೆಹಲಿಯಲ್ಲಿ ಹೆಚ್ಚುತ್ತಿರುವ ಕಾರಣ ನಿನ್ನೆ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಪರಿಶೀಲನಾ ಸಭೆ ನಡೆಸಿದ್ದರು. ಡೆಂಗ್ಯೂ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮತ್ತು ಈಗಾಗಲೇ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸ್ಥಳೀಯ ಅಧಿಕಾರಿಗಳು, ಸಚಿವರೊಂದಿಗೆ ಚರ್ಚೆ ನಡೆಸಿದ್ದರು.