ರಾಜ್ಯಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚುತ್ತಿದೆ. ಇದರಿಂದ ಜನರು ಮನೆಯಿಂದ ಹೊರ ಬರೋಕು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಮುಂಜಾಗ್ರತ ಕ್ರಮವಾಗಿ ನಾಳೆಯಿಂದ ಪ್ರಾಥಮಿಕ ಶಾಲೆಗಳನ್ನು ಬಂದ್ ಮಾಡಲಾಗಿದ್ದು, ಮಾಲಿನ್ಯ ನಿಯಂತ್ರಣ ಆಗುವವರೆಗೂ ಶಾಲೆಗಳನ್ನು ತೆರೆಯುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್, ದೆಹಲಿಯ ಮಾಲಿನ್ಯ ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾಳೆಯಿಂದ ದೆಹಲಿಯ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ಮುಚ್ಚುತ್ತಿದ್ದೇವೆ. ಮಾಲಿನ್ಯ ನಿಯಂತ್ರಣಕ್ಕೆ ಬರುವವರೆಗೂ ಶಾಲೆಗಳನ್ನು ತೆರೆಯುವುದಿಲ್ಲ. 5 ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಪರಿಸ್ಥಿತಿ ಸುಧಾರಿಸುವವರೆಗೆ ಶಾಲೆಗಳಲ್ಲಿ ಹೊರಾಂಗಣ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗುತ್ತದೆ ಎಂದಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್, ವಾಯುಮಾಲಿನ್ಯ ಕೇವಲ ದೆಹಲಿ ಅಥವಾ ಪಂಜಾಬ್‌ಗೆ ಸೀಮಿತವಾಗಿಲ್ಲ. ಉತ್ತರ ಭಾರತದ ಸಮಸ್ಯೆಯಾಗಿದೆ. ಹರಿಯಾಣ, ರಾಜಸ್ಥಾನದಲ್ಲೂ ವಾಯು ಮಾಲಿನ್ಯ ಹೆಚ್ಚುತ್ತಿದೆ. ಕೇವಲ ಪಂಜಾಬ್, ದೆಹಲಿ ಸರ್ಕಾರ ಮಾತ್ರ ಇದಕ್ಕೆ ಹೊಣೆಯಲ್ಲ. ಸದ್ಯ ರೈತರು ಹುಲ್ಲಿಗೆ ಬೆಂಕಿ ಇಡುವುದನ್ನು ಕಡಿಮೆ ಮಾಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ ಎಂದರು. ವಾಯುಮಾಲಿನ್ಯಕ್ಕೆ 6 ತಿಂಗಳ ಹಿಂದೆ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದ ಆಪ್ ಸರ್ಕಾರ ಹೊಣೆಯಲ್ಲ ಎಂದರು.