ಮಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಟೊರಿಕ್ಷಾ ಚಾಲಕ ಉಜ್ಜೋಡಿಯ ಪುರುಷೋತ್ತಮ ಪೂಜಾರಿ ಅವರ ಮನೆಯನ್ನು ದುರಸ್ತಿಗೊಳಿಸಲು ‘ಗುರುಬೆಳದಿಂಗಳು ಫೌಂಡೇಷನ್’ ಮುಂದಾಗಿದೆ.
ಗುರು ಬೆಳದಿಂಗಳು ಫೌಂಡೇಷನ್ ಅಧ್ಯಕ್ಷ ಹಾಗೂ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್. ಘಟನೆ ನಡೆದ ಮರುದಿನವೇ ಆಸ್ಪತ್ರೆಗೆ ಭೇಟಿ ನೀಡಿ, ಪುರುಷೋತ್ತಮ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು.
ಪುರುಷೋತ್ತಮ್ ಇತ್ತೀಚೆಗಷ್ಟೇ ಮನೆ ದುರಸ್ತಿಗೊಳಿಸಲು ನಿರ್ಧರಿಸಿದ್ದರು. ಆದರೆ ಅಷ್ಟರಲ್ಲಾಗಲೇ ಈ ದುರ್ಘಟನೆ ನಡೆದಿತ್ತು. ವಿಷಯ ತಿಳಿದ ಪದ್ಮರಾಜ್ ಇತ್ತೀಚೆಗೆ ಪುರುಷೋತ್ತಮ್ ಕುಟುಂಬಸ್ಥರನ್ನು ಭೇಟಿಯಾಗಿ ‘ಗುರುಬೆಳದಿಂಗಳು ಫೌಂಡೇಷನ್’ ವತಿಯಿಂದ ಮನೆಯನ್ನು ನಿರ್ಮಿಸಿಕೊಡುವ ಭರವಸೆಯನ್ನು ನೀಡಿದ್ದರು. ಅಲ್ಲದೆ ಕುಟುಂಬ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿದ್ದರು.
ಎಂಜಿನಿಯರ್ ದೀವರಾಜ್ ಜೊತೆ ಪುರುಷೋತ್ತಮ ಪೂಜಾರಿ ಅವರ ಮನೆಗೆ ಪದ್ಮರಾಜ್ ಭೇಟಿ ನೀಡಿ ಅವರ ಕುಟುಂಬ ಸದಸ್ಯರ ಜೊತೆ ಮನೆ ನವೀಕರಣದ ಕುರಿತು ಚರ್ಚಿಸಿದರು. ಮುಂದಿನ ವಾರದಿಂದ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು.