ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕೋಮಲ್ ವಿರುದ್ಧ ಶಾಲಾ ಮಕ್ಕಳ ಸ್ವೆಟರ್ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಟ ಕೋಮಲ್ ವಿರುದ್ಧ ಆರೋಪ ಮಾಡಿದ್ದಾರೆ.
ಬಿಬಿಎಂಪಿ ಪ್ರತಿವರ್ಷ ತನ್ನ ಪಾಲಿಕೆ ವ್ಯಾಪ್ತಿಯ ಮಕ್ಕಳಿಗೆ ಸ್ವೆಟರ್ನ್ನು ವಿತರಿಸುತ್ತದೆ. ಈ ಸ್ವೆಟರ್ ವಿತರಣೆಗೆ ಟೆಂಡರ್ ಕರೆಯಲಾಗುತ್ತದೆ. ಕಳೆದ ವರ್ಷ ಈ ಸ್ವೆಟರ್ ಟೆಂಡರ್ ಅನ್ನು ಕೋಮಲ್ ಪಡೆದಿದ್ದಾರೆ. ಅಷ್ಟೇ ಅಲ್ಲದೇ, ಇದಕ್ಕೆ ಸಂಬಂಧಿಸಿದಂತೆ ಹಣವನ್ನು ಕೂಡಾ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ವಿಪರ್ಯಾಸ ಎಂದರೆ, ಕಳೆದ ವರ್ಷ ಶಾಲೆಗಳೇ ನಡೆದಿಲ್ಲ. ಆದರೂ ಕೂಡ ಸ್ವೆಟರ್ ವಿತರಣೆ ಮಾಡಿದ್ದೇವೆ ಎಂದು ಹಣ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಈ ಸಂಬಂಧ ನಿನ್ನೆ ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಿತು. ಸ್ವೆಟರ್ ಹರಾಜು ಹಾಕುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರಯ ಕಮಿಷನರ್ ಕಚೇರಿ ಮುಂಭಾಗ ನೂರಾರು ಸ್ವೆಟರ್ ಗಳನ್ನು ಸುರಿದು ಒಂದು ಸ್ವೆಟರ್ ರೂ.50 ಬೆಲೆ ನಿಗದಿ ಮಾಡಿ ಹರಾಜು ಮಾಡಿ ಪ್ರತಿಭಟನೆ ನಡೆಸಿದರು.
ಆದರೆ, ನಟ ಕೋಮಲ್ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ‘ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ನನ್ನ ಹೆಸರನ್ನು ವಿನಾಕಾರಣ ಬಳಸಿಕೊಂಡು ಮಸಿ ಬಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಅಂತಹವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ನಟ ಕೋಮಲ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ‘ನಾನು ಟೆಂಡರ್ ತೆಗೆದುಕೊಂಡಿಲ್ಲ. ಯಾವ ಸ್ವೆಟರ್ ವ್ಯವಹಾರವನ್ನೂ ಮಾಡಿಲ್ಲ. ಸೆಲೆಬ್ರಿಟಿ ಹೆಸರು ಹೇಳಿಕೊಂಡು ಪ್ರಚಾರ ಆಗುತ್ತೆ ಎಂದು ಹೆಸರನ್ನು ಬೇಕಾಬಿಟ್ಟಿ ಬಳಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.