ವಾಣಿಜ್ಯ ಜಾಹಿರಾತು
ನವದೆಹಲಿ: ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಮೌಲ್ಯ ವರ್ಧಿತ ತೆರಿಗೆ ಅನ್ನು ಶೇ.30ರಿಂದ 19.40ಕ್ಕೆ ಇಳಿಕೆ ಮಾಡಿರುವುದಾಗಿ ದೆಹಲಿ ಸರ್ಕಾರ ಘೋಷಿಸಿದ್ದು, ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 8 ರೂಪಾಯಿ ಇಳಿಕೆಯಾದಂತಾಗಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸಚಿವ ಸಂಪುಟ ನಿರ್ಧಾರ ಕೈಗೊಂಡಿದ್ದು, ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಅನ್ವಯವಾಗಲಿದೆ ಎಂದು ತಿಳಿಸಿದೆ. ವ್ಯಾಟ್ ದರ ಇಳಿಕೆ ಮಾಡಿದ್ದರಿಂದ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 95 ರೂಪಾಯಿಗೆ ಇಳಿಕೆಯಾಗಿದೆ.
ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ ಲೀಟರ್ ಗೆ 103.97 ರೂಪಾಯಿ ಇದ್ದು, ಇದೀಗ 8 ರೂ. ಇಳಿಕೆಯಾಗಿದೆ. ಡೀಸೆಲ್ ಬೆಲೆ ಲೀಟರ್ ಗೆ 86.67 ರೂಪಾಯಿ ಆಗಿದೆ.
ಕಳೆದ 27 ದಿನಗಳಿಂದ ಇಂಧನ ದರದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ನವೆಂಬರ್ 4ರಂದು ಕೇಂದ್ರ ಸರ್ಕಾರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿತ್ತು. ಇದರಿಂದಾಗಿ ದರ ಕಡಿಮೆಯಾಗಿತ್ತು.
ವಾಣಿಜ್ಯ ಜಾಹಿರಾತು