ಮುಂಬೈ: ಮಂಗಳೂರು ಮೂಲದ ದಿವಿತಾ ರೈ ಸೌಂದರ್ಯ ಸ್ಪರ್ಧೆ ‘ಲಿವಾ ಮಿಸ್ ದಿವಾ ಯುನಿವರ್ಸ್-2022’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2021ರ ಮಿಸ್ ಯುನಿವರ್ಸ್ ಹರ್ನಾಝ್ ಸಂಧು ಅವರು ಲಿವಾ ಮಿಸ್ ದಿವಾ 2022 ಪ್ರಶಸ್ತಿ ಕಿರೀಟ ದಿವಿತಾ ರೈಯವರಿಗೆ ತೊಡಿಸಿದರು.
ಮಂಗಳೂರಿನಲ್ಲಿ ಜನಿಸಿದ ದಿವಿತಾ ರೈ ಅವರ ತಂದೆ ದಿಲೀಪ್ ರೈ ಹಾಗೂ ತಾಯಿ ಪವಿತ್ರಾ ರೈ. ತಂದೆಯ ಉದ್ಯೋಗದ ಕಾರಣದಿಂದ ಮುಂಬೈನಲ್ಲಿ ನೆಲೆಸಿರುವ ಅವರು ಜೆ.ಜೆ.ಕಾಲೇಜ್ ಆಫ್ ಆರ್ಕಿಟೆಕ್ಚರ್ ನಲ್ಲಿ ಪದವಿ ಪಡೆದಿದ್ದಾರೆ. ಇವರ ಅಣ್ಣ ದೈವಿಕ್ ರೈ ಕ್ರಿಕೆಟಿಗ. ಭಾರತದ ಒಳಾಂಗಣ ಕ್ರಿಕೆಟ್ ತಂಡದ ಸದಸ್ಯರಾಗಿರುವ ಇವರು 2017ರ ಒಳಾಂಗಣ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿದ್ದರು.
ದಿವಿತಾ ರೈ ವೃತ್ತಿಯಲ್ಲಿ ವಾಸ್ತುಶಿಲ್ಪಿ ಮತ್ತು ಮಾಡೆಲ್ ಆಗಿದ್ದು, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಚಿತ್ರಕಲೆ, ಸಂಗೀತ ಆಲಿಸುವುದು ಮತ್ತು ಓದುವುದು ಮುಂತಾದ ವಿವಿಧ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಅವರು ಈಗ 71 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ತೆಲಂಗಾಣದ ಪ್ರಜ್ಞಾ ಅಯ್ಯಗಾರಿಯನ್ನು ಮಿಸ್ ದಿವಾ ಸುಪ್ರಾನ್ಯಾಷನಲ್ 2022 ಎಂದು ಘೋಷಿಸಲಾಯಿತು.ಮಿಸ್ ದಿವಾ ಯೂನಿವರ್ಸ್ 2022 ಸ್ಪರ್ಧೆಯಲ್ಲಿ ಅನೇಕ ತಾರೆಯರು ಮತ್ತು ಮಾಜಿ ಸೌಂದರ್ಯ ಸ್ಪರ್ಧೆಯ ವಿಜೇತರು ಹಾಜರಿದ್ದರು. ಮಿಸ್ ಯೂನಿವರ್ಸ್ 2000 ಲಾರಾ ದತ್ತಾ, ಮಿಸ್ ಇಂಡಿಯಾ 1964 ಮೆಹರ್ ಕ್ಯಾಸ್ಟೆಲಿನೊ, ಮಿಸ್ ಇಂಡಿಯಾ 1980 ಸಂಗೀತಾ ಬಿಜಲಾನಿ ಮತ್ತು ಮಿಸ್ ಇಂಡಿಯಾ ಯೂನಿವರ್ಸ್ 2004 ತನುಶ್ರೀ ದತ್ತಾ ಕೂಡ ಈವೆಂಟ್‌ನಲ್ಲಿ ಭಾಗವಹಿಸಿದ್ದರು.
ಲೀವಾ ಮಿಸ್ ದೀವಾ ಯೂನಿವರ್ಸ್-2020ರ ಪ್ರಶಸ್ತಿಯನ್ನು ಉಡುಪಿಯ ಉದ್ಯಾವರ ಕೊರಂಗ್ರಪಾಡಿ ನಿವಾಸಿ ಅಡ್ಲಿನ್ ಕ್ಯಾಸ್ಟಲಿನೊ ಪಡೆದುಕೊಂಡಿದ್ದರು.