ಅಕ್ರಮವಾಗಿ ತಲೆ ಎತ್ತಿರುವ ದೇಶದ ಭಾರೀ ಎತ್ತರದ ಬಿಲ್ಡಿಂಗ್ ಗಳನ್ನು ನೆಲಸಮ ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಆಗಸ್ಟ್ ಕೊನೆಯಲ್ಲಿ ನೋಯ್ಡಾದಲ್ಲಿದ್ದ ಭಾರೀ ಎತ್ತರದ ಸೂಪರ್‌ಟೆಕ್ ಅವಳಿ ಕಟ್ಟಡ ನೆಲಸಮದ ಬಳಿಕ ಇದೀಗ ಗುರುಗ್ರಾಮದ ಬೃಹತ್ ಕಟ್ಟಡವೊಂದು ನೆಲಸಮವಾಗಲು ಸಿದ್ದವಾಗಿದೆ.
ಗುರುಗ್ರಾಮದಲ್ಲಿರುವ ಚಿಂಟೆಲ್ಸ್ ಪ್ಯಾರಾಡಿಸೊ ಸೊಸೈಟಿಯಲ್ಲಿರುವ ಬೃಹತ್ ಕಟ್ಟಡವೊಂದನ್ನು ಕೆಡವಲು ನಿರ್ಧರಿಸಲಾಗಿದೆ. ನೋಯ್ಡಾದ ಅವಳಿ ಕಟ್ಟಡಗಳನ್ನು ನೆಲಸಮಗೊಳಿಸಿದ ರೀತಿಯಲ್ಲಿಯೇ ಸ್ಫೋಟಕ ಹಾಗೂ ಯಂತ್ರಗಳನ್ನು ಬಳಸಿಕೊಂಡು ಚಿಂಟೆಲ್ಸ್ ಪ್ಯಾರಾಡಿಸೊ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿರುವ ಟವರ್ ಡಿ ಅನ್ನು ಶೀಘ್ರದಲ್ಲೇ ಕೆಡವಲು ಗುರುಗ್ರಾಮದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಬಗ್ಗೆ ಈಗಾಗಲೇ ನಗರದ ಆಡಳಿ ಅಧಿಕಾರಿಗಳು ನೋಯ್ಡಾದ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿದೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಚಿಂಟೆಲ್ಸ್ ಪ್ಯಾರಾಡಿಸೊ ಅಪಾರ್ಟ್ಮೆಂಟ್‌ನ ಟವರ್ ಡಿ ಕಟ್ಟಡ ಕಳೆದ ವರ್ಷ ಫೆಬ್ರವರಿಯಲ್ಲಿ 10ರಂದು ಟವರ್ ನ ಒಂದು ಭಾಗ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಆ ಬಳಿಕ ಈ ಟವರ್ ಕಿಲ್ಲರ್ ಟವರ್ ಎಂದು ಕುಖ್ಯಾತಿ ಗಳಿಸಿತ್ತು.
ಕಟ್ಟಡದ ಕುರಿತು ಸಾಕಷ್ಟು ಅಪವಾದಗಳು ಕೇಳಿ ಬಂದಿ ಹಿನ್ನೆಲೆಯಲ್ಲಿ ಐಐಟಿ ದೆಹಲಿಯ ತಜ್ಞರ ತಂಡವನ್ನು ಕಟ್ಟಡದ ತನಿಖೆಗೆ ನೇಮಕಗೊಳಿಸಿತ್ತು. ತನಿಖೆ ನಡೆಸಿದ ತಂಡ ಟವರ್ ಡಿ ಕಟ್ಟಡ ನಿರ್ಮಿಸಲು ಬಳಸಲಾದ ವಸ್ತುಗಳ ಗುಣಮಟ್ಟ ಅಪಾಯಕಾರಿಯಾಗಿದೆ ಎಂದು ವರದಿ ನೀಡಿತ್ತು, ಈ ಹಿನ್ನೆಲೆಯಲ್ಲಿ ಇದೀಗ ಟವರ್ ಡಿ ಕೆಡವಲು ನಿರ್ಧರಿಸಲಾಗಿದೆ.
ಕಟ್ಟಡದ ನೆಲಸಮದ ಕುರಿತು ಮತ್ತು ಅಪಾರ್ಟ್ಮೆಂಟ್ ಹತ್ತಿರದ ನಿವಾಸಿಗಳೊಂದಿಗೆ ಅಧಿಕಾರಿಗಳು ಒಪ್ಪಂದ ಮಾಡಿಕೊಂಡು ನೋಯ್ಡಾ ಅವಳಿ ಕಟ್ಟಡ ನೆಲಸಮದ ಮಾದರಿಯಲ್ಲಿಲ್ಲೇ ಟವರ್ ಡಿ ಅನ್ನು ಕೆಡವಲು ನಿರ್ಧರಿಸಲಾಗಿದೆ.