ವಾಣಿಜ್ಯ ಜಾಹಿರಾತು
ಬೆಳಗ್ಗೆ ಏಳುತ್ತಿದ್ದಂತೆಯೇ ಸಾಮಾನ್ಯವಾಗಿ ಎಲ್ಲರೂ ಟೀ, ಕಾಫಿ ಕುಡಿಯುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿರುತ್ತಾರೆ. ಇದರಿಂದ ದಿನವಿಡೀ ರಿಫ್ರೆಶ್ ಆಗಿರಬಹುದು ಅಂದುಕೊಳ್ಳುತ್ತಾರೆ. ಇನ್ನು ಕೆಲವರು ಒತ್ತಡವಿದ್ದಾಗ ಟೀ ಕುಡಿದು ರಿಲ್ಯಾಕ್ಸ್ ಆಗುತ್ತಾರೆ. ಆದರೆ ಟೀ, ಕಾಫಿ ಕುಡಿಯುವುದರಿಂದ ಎಷ್ಟು ಪ್ರಯೋಜನವಿದೆಯೋ, ಅಷ್ಟೇ ದುಷ್ಪರಿಣಾಮವೂ ಇದೆ ಅನ್ನೋದು ಕೂಡಾ ನಿಜ. ಆದರೆ ಸೌಂದರ್ಯದ ವಿಷಯ ಬಂದಾಗ ಟೀ, ಕಾಫೀ, ಗ್ರೀನ್ ಟೀ ಪುಡಿಯಿಂದ ಹಲವು ಪ್ರಯೋಜನಗಳಿವೆ.
ಹೀಗಾಗಿ ಯಾವಾಗಲೂ ಟೀ, ಕಾಫಿ ಕುಡಿದ ಬಳಿಕ ಪುಡಿಯ ಬ್ಯಾಗ್‍ನ್ನು ಎಸೆಯುವ ಬದಲು ಸೌಂದರ್ಯವರ್ಧನೆಗೆ ಬಳಸಿಕೊಳ್ಳಬಹುದು. ಮುಖದ ಸೌಂದರ್ಯವನ್ನು ಹೆಚ್ಚಿಸುವ ಗುಣ ಟೀ ಬ್ಯಾಗ್‍ನಲ್ಲಿದೆ. ಟೀ, ಕಾಫಿ ಪುಡಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಏಜಿಂಗ್ ಗುಣಗಳು ಮುಖದ ಮೇಲಿರುವ ಕಲೆಯನ್ನು ನಿವಾರಿಸಿ ತ್ವಚೆಯ ಹೊಳಪು ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ. ತ್ವಚೆಯನ್ನು ಟೋನ್ ಮಾಡಿ ಹೆಚ್ಚು ಮೃದುವಾಗಿ ಕಾಣುವಂತೆ ಮಾಡುತ್ತದೆ.
- ಟೀ ಬ್ಯಾಗ್‍ನಲ್ಲಿರುವ ಎಲೆಗಳು ಚರ್ಮದ ಮೇಲೆ ಸ್ಕ್ರಬ್‍ನಂತೆ ಕಾರ್ಯನಿರ್ವಹಿಸುತ್ತವೆ. ಬಳಸಿದ ಟೀ ಬ್ಯಾಗ್‍ನಿಂದ ಎಲೆಗಳನ್ನು ತೆಗೆದು, ಇದಕ್ಕೆ ಸ್ಪಲ್ಪ ನೀರು ಸೇರಿಸಿ ಜಜ್ಜಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಮುಖಕ್ಕೆ ಹಚ್ಚಿ, 10 ನಿಮಿಷದ ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ವಾರದಲ್ಲಿ 2 ಸಾರಿ ಹೀಗೆ ಮಾಡುವುದರಿಂದ ತ್ವಚೆಯ ಹೊಳಪು ಹೆಚ್ಚುತ್ತದೆ.
- ಟೀ ಎಲೆಗಳಲ್ಲಿರುವ ಕ್ಯಾಟೆಚಿನ್ ಅಂಶ ಮೊಡವೆಗಳು ಮತ್ತು ಮೊಡವೆಗಳಿಂದಾದ ಕಲೆಗಳನ್ನು ಹೋಗಲಾಡಿಸುತ್ತದೆ. ಬಳಸಿದ ಟೀ ಎಲೆಯನ್ನು ದಿನಕ್ಕೊಂದು ಬಾರಿ ನಯವಾಗಿ ಮುಖಕ್ಕೆ ಹಚ್ಚಿಕೊಂಡರೆ ಸಾಕು ಕ್ರಮೇಣ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ.
- ಚರ್ಮ ಟ್ಯಾನ್ ಆಗಿದ್ದರೆ, ಸನ್ ಬರ್ನ್ ಆಗಿದ್ದರೆ ಟೀಯನ್ನು ನೀರಿನಲ್ಲಿ ಕುದಿಸಿ. ಆ ನೀರನ್ನು ತಣ್ಣಗಾದ ಬಳಿಕ ಬಟ್ಟೆಯಲ್ಲಿ ಅದ್ದಿ ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆಯ ಬಳಿಕ ತೊಳೆಯಬೇಕು. ಇದರಿಂದ ಟ್ಯಾನ್ ಕಡಿಮೆಯಾಗುತ್ತದೆ.
- ಚಳಿಗಾಲದಲ್ಲಿ ತುಟಿಗಳು ಒಡೆಯುವುದು ಸಾಮಾನ್ಯ. ಅಂತಹಾ ಸಂದರ್ಭದಲ್ಲಿ ಗ್ರೀನ್ ಟೀ ಬ್ಯಾಗನ್ನು ಬಿಸಿ ನೀರಿನಲ್ಲದ್ದಿ ತುಟಿಯ ಮೇಲೆ ಕೆಲ ಕಾಲ ಇಟ್ಟುಕೊಳ್ಳಿ. ಇವು ತುಟಿಗಳನ್ನು ಹೈಡ್ರೇಟ್ ಮಾಡಿ ತುಟಿ ಒಡೆಯುವುದನ್ನು ತಡೆಯುತ್ತದೆ.
- ಕೂದಲು ವಿಪರೀತ ಉದುರುತ್ತಿದ್ದರೆ ಬ್ಲ್ಯಾಕ್ ಟೀಯ ಸಹಾಯ ಪಡೆಯಬಹುದು. ಸ್ವಲ್ಪ ಬ್ಲ್ಯಾಕ್ ಟೀಯನ್ನು ಕುದಿಸಿ. ತಣ್ಣಗಾದ ಬಳಿಕ ಅದನ್ನು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಬೇಕು. ಅರ್ಧಗಂಟೆಯ ಬಳಿಕ ಸ್ನಾನ ಮಾಡಿ, ಕೂದಲು ನಯವಾಗುತ್ತದೆ ಮತ್ತು ಇದೇ ರೀತಿ ವಾರಕ್ಕೆರಡು ಮಾಡುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.
- ಒಂದು ಬಕೆಟ್ ನೀರಿನಲ್ಲಿ ಬಳಸಿದ ಟೀ ಬ್ಯಾಗ್ ಹಾಕಿ ಅದರಲ್ಲಿ ಪಾದಗಳನ್ನು ಮುಳುಗಿಸಿ ಇಟ್ಟರೆ ತಾಜಾತನದ ಅನುಭವವಾಗುತ್ತದೆ. ಕಾಲಿನ ಚರ್ಮ ಕೂಡಾ ಮೃದುವಾಗುತ್ತದೆ.
ವಾಣಿಜ್ಯ ಜಾಹಿರಾತು