ವಾಣಿಜ್ಯ ಜಾಹಿರಾತು

ಬಿಸಿಲಿನ ಬೇಗೆಯಿಂದ ಬೆಂದು ಬಸವಳಿದ ಸಮಯದಲ್ಲಿ ವರುಣನ ಆಗಮನ ಎಲ್ಲರಿಗೂ ಖುಷಿಯನ್ನೇ ಕೊಡುತ್ತೆ. ಆದ್ರೆ ಮಳೆಯಲ್ಲಿ ತ್ವಚೆಯ ಆರೈಕೆ ಸ್ವಲ್ಪ ಕಷ್ಟನೇ. ಎಷ್ಟೊಂದು ಜನರಿಗೆ ಮಳೆಗಾಲದಲ್ಲೂ ತ್ವಚೆಯ ಆರೈಕೆಯ ಅಗತ್ಯ ಇರುತ್ತೆ ಅನ್ನೋದು ಗೊತ್ತೇ ಇರಲ್ಲ. ಅಂಥವರಿಗೆ ಇಲ್ಲಿದೆ ಕೆಲವೊಂದು ಟಿಪ್ಸ್..

ಚರ್ಮದ ಸಮಸ್ಯೆ:
ಮಳೆಗಾಲದಲ್ಲಿ ಚರ್ಮವು ಜಿಡ್ಡು, ಮೊಡವೆ, ತೇವಾಂಶದಿಂದ ಉಂಟಾಗುವ ಅಲರ್ಜಿ, ಚರ್ಮದ ತುರಿಕೆ ಮತ್ತು ಶಿಲೀಂದ್ರಗಳ ಸೋಂಕು ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಡಬಹುದು. ಅಂತಹ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಲು ಕೆಲವು ಆರೋಗ್ಯ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ನೀರಿನಲ್ಲಿದೆ ಆರೋಗ್ಯ ತ್ವಚೆ:


ಮಳೆಗಾಲದಲ್ಲಿ ಹೆಚ್ಚಿನ ಆದ್ರತೆಯಿಂದ ಚರ್ಮವು ಹೆಚ್ಚು ತೇವಾಂಶಕ್ಕೆ ಒಳಗಾಗುತ್ತೆ. ಕೆಲವರಿಗೆ ಅತಿಯಾಗಿ ಬೆವರುವ ಸಂಭವಗಳೂ ಇರುತ್ತವೆ. ಚರ್ಮವು ಪದೇ ಪದೇ ಕೊಳೆ ಮತ್ತು ಜಿಡ್ಡಿನಿಂದ ಕೂಡಿರುವ ಸಾಧ್ಯತೆಗಳಿರುತ್ತದೆ. ಆಗ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ಇಲ್ಲವಾದಲ್ಲಿ ತ್ವಚೆಯ ಆರೋಗ್ಯ ಕೆಡುತ್ತದೆ. ಹಾಗಾಗಿ ಮಳೆಗಾಲದಲ್ಲೂ ದಿನಕ್ಕೆ 3ರಿಂದ 5 ಲೀಟರ್ ನೀರು ಕುಡಿದರೆ ಚರ್ಮಕ್ಕೆ ಸಾಕಷ್ಟು ನೀರಿನಾಂಶ ಸಿಗುತ್ತದೆ. ಚರ್ಮದ ಆರೋಗ್ಯವೂ ಉತ್ತಮವಾಗಿರುತ್ತದೆ.

ಎಣ್ಣೆ ಪದಾರ್ಥಗಳಿಂದ ದೂರವಿರಿ:


ಮಳೆಗಾಲದಲ್ಲಿ ತಂಪು ವಾತಾವರಣದಿಂದಾಗಿ ಬಿಸಿಯಾದ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ತಿನ್ನುವ ಆಸೆ ಎಲ್ಲರನ್ನೂ ಕಾಡುತ್ತದೆ. ಆದರೆ ಅಂತಹ ಆಹಾರವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಂಸ್ಕರಿಸಿದ ತೈಲ ಹಾಗೂ ಅಧಿಕ ಎಣ್ಣೆಯಿಂದ ಕೂಡಿದ ಆಹಾರವು ಚರ್ಮದ ಆರೋಗ್ಯಕ್ಕೆ ಮಾರಕವಾಗಿದೆ. ಹೀಗಾಗಿ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸೇವಿಸಬಾರದು.

ಹಣ್ಣುಗಳಲ್ಲಿದೆ ಸೌಂದರ್ಯದ ಗುಟ್ಟು:
ಮಳೆಗಾಲದಲ್ಲೇ ಕೆಲ ವೈವಿಧ್ಯ ಹಣ್ಣುಗಳು ದೊರೆಯುತ್ತವೆ. ಅವುಗಳು ಚರ್ಮ ಮತ್ತು ಆರೋಗ್ಯವನ್ನು ಕಾಪಾಡುವಲ್ಲಿ ಸಹಕರಿಸುತ್ತದೆ. ಚೆರ್ರಿ, ಪ್ಲಮ್, ಪೀಷ್, ಲಿಚಿ, ದಾಳಿಂಬೆ ಹಾಗೂ ನೇರಳೆ ಹಣ್ಣುಗಳನ್ನು ಆದಷ್ಟು ಸೇವಿಸಬೇಕು. ಅವುಗಳಲ್ಲಿರುವ ಫೈಟೋನ್ಯೂಟ್ರಿಯೆಂಟ್‍ಗಳು, ಜೀವಸತ್ವಗಳು, ಖನಿಜಗಳು, ಆಂಟಿಆಕ್ಸಿಡೆಂಟ್‍ಗಳು ಚರ್ಮವನ್ನು ಆಂತರಿಕವಾಗಿ ಪೋಷಿಸುವಲ್ಲಿ ಉಪಯುಕ್ತವಾಗಿದೆ.

ಉತ್ತಮ ಪಾನೀಯ ಸೇವನೆ:
ದೇಹದಲ್ಲಿ ಪಿತ್ತ ದೋಷವನ್ನು ನಿಯಂತ್ರಿಸುವುದರಿಂದ ಚರ್ಮದ ಮೇಲೆ ಉಂಟಾಗುವ ಹಾನಿ ಹಾಗೂ ಆರೋಗ್ಯ ಸಮಸ್ಯೆಯನ್ನು ತಡೆಯಬಹುದು. ಕೆಫಿನ್ ಹೊಂದಿರುವ ಪಾನೀಯಗಳನ್ನು ಕುಡಿಯಬಾರದು. ಶುಂಠಿ, ಅರಿಶಿನ, ತುಳಸಿ, ಜೀರಿಗೆ ಮೊದಲಾದ ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯ ಹಾಗೂ ಪಾನೀಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಅವು ದೇಹಕ್ಕೆ ಉತ್ತಮ ಪೋಷಣೆ ನೀಡುವುದಲ್ಲದೇ, ಚರ್ಮವನ್ನು ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ.

ಸೊಪ್ಪು, ತರಕಾರಿಗಳೇ ರಾಮಬಾಣ:
ಧಾನ್ಯಗಳು, ಹಸಿರು ಸೊಪ್ಪು, ತರಕಾರಿ ಮತ್ತು ಹಣ್ಣುಗಳನ್ನು ಆದಷ್ಟು ಹೆಚ್ಚು ಉಪಯೋಗಿಸಬೇಕು. ಅವುಗಳು ಕರುಳಿನ ಕೆಲಸವನ್ನು ಚುರುಕುಗೊಳಿಸುತ್ತವೆ. ಕರುಳಿನ ಸೂಕ್ಷ್ಮಾಣುಗಳಿಗೆ ಆಹಾರವಾಗಿ ಪರಿಣಮಿಸುತ್ತದೆ. ಕರುಳಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಂಡರೆ ಚರ್ಮಕ್ಕೆ ಆಳವಾದ ಪೋಷಣೆ ದೊರೆಯುತ್ತದೆ.

ಮನೆಯಲ್ಲೇ ಮಾಡಿ ತ್ವಚೆಯ ಆರೈಕೆ:


ಬೇವಿನೆಲೆಯ ನೀರಿನ ಸ್ನಾನ, ಅಲೋವೆರಾ, ಅರಿಶಿನ, ಗುಲಾಬಿ ನೀರು, ಮೊಸರು, ಕಡಲೆಹಿಟ್ಟು ಮೊದಲಾದ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ಚರ್ಮಕ್ಕೆ ಲೇಪಗಳನ್ನು ಮಾಡಿಕೊಳ್ಳಬೇಕು. ಕೆಮಿಕಲ್ ಭರಿತ ಸಾಬೂನು, ಬಾಡಿ ಲೋಶನ್ ಮೊದಲಾದವುಗಳಿಗಿಂತ ಪ್ರಾಕೃತಿಕ ಉತ್ಪನ್ನಗಳೇ ತ್ವಚೆಯನ್ನು ರಕ್ಷಿಸಲು ಹಾಗೂ ಕಾಂತಿ ಹೆಚ್ಚಿಸಲು ಸಹಕಾರಿಯಾಗಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.