ಮುಖ, ಕೂದಲು, ಪಾದದ ಸೌಂದರ್ಯದ ಬಗ್ಗೆ ನಾವು ಹೆಚ್ಚಿನ ಗಮನ ನೀಡುತ್ತೇವೆ. ಆದರೆ ಮೊಣಕೈ ಮತ್ತು ಮೊಣಕಾಲಿನ ಆರೈಕೆಯನ್ನು ನಿರ್ಲಕ್ಷಿಸುತ್ತೇವೆ.
ಹಾಗಾಗಿ ಆ ಭಾಗದಲ್ಲಿ ಜಿಡ್ಡುಗಟ್ಟಿದಂತಾಗಿ ಕಪ್ಪು ಕಾಣುತ್ತದೆ. ಸುಂದರ ಡ್ರೆಸ್ ತೊಟ್ಟಾಗ ಇದು ನಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕಿಯಂತಾಗುತ್ತದೆ. ಅನೇಕರು ಇದೇ ಕಾರಣಕ್ಕೆ ಫುಲ್ ಸ್ಲೀವ್ ಇರುವ ಡ್ರೆಸ್ ಇಷ್ಟಪಡುತ್ತಾರೆ.
ಇನ್ಮುಂದೆ ಮೊಣಕೈ ಹಾಗೂ ಮೊಣಕಾಲು ಕಪ್ಪಾಗಿದೆ ಎನ್ನುವ ಕಾರಣಕ್ಕೆ ನೀವು ಮುಜುಗರಪಟ್ಟುಕೊಳ್ಳಬೇಕಾಗಿಲ್ಲ. ಈ ಮನೆಮದ್ದಿನ ಮೂಲಕ ಕೆಲವೇ ದಿನಗಳಲ್ಲಿ ಮೊಣಕೈ ಹಾಗೂ ಮೊಣಕಾಲಿನ ಸೌಂದರ್ಯವನ್ನು ನೀವು ಹೆಚ್ಚಿಸಿಕೊಳ್ಳಬಹುದು.
ಅರಿಶಿನ: ಅರಿಶಿನವು ಚರ್ಮದ ಟೋನ್ನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಅರಿಶಿನವನ್ನು ಹಾಲು ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ನಂತರ ಈ ಪೇಸ್ಟ್ನ್ನು ಮೊಣಕೈ ಮತ್ತು ಮೊಣಕಾಲುಗಳಿಗೆ ಹಚ್ಚಿ.
20 ನಿಮಿಷದ ಬಳಿಕ ತಣ್ಣೀರಿನಿಂದ ತೊಳೆಯಿರಿ.
ಸಕ್ಕರೆ : ಸಕ್ಕರೆ ಸತ್ತ ಕೋಶಗಳನ್ನು ಅಂದರೆ ಡೆಡ್ ಸೆಲ್ಸ್ನ್ನು ತೆಗೆದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಕಪ್ಪು ಮೊಣಕೈಗಳಿಗೆ ಈ ಪರಿಹಾರವನ್ನು ಅಳವಡಿಸಿಕೊಳ್ಳಲು, ಆಲಿವ್ ಎಣ್ಣೆಯನ್ನು ಸಕ್ಕರೆಯಲ್ಲಿ ಬೆರೆಸಿ ನಂತರ ಮೊಣಕೈ ಮತ್ತು ಮೊಣಕಾಲುಗಳ ಮೇಲೆ ಮಸಾಜ್ ಮಾಡಿ. ವೃತ್ತಾಕಾರದ ಚಲನೆಯಲ್ಲಿ ಹಗುರವಾಗಿ ಮಸಾಜ್ ಮಾಡಿ ಮತ್ತು ನಂತರ ಉಗುರು ಬೆಚ್ಚಗಿನ ನೀರಿನಿಂದ ಚರ್ಮವನ್ನು ತೊಳೆಯಿರಿ.
ತೆಂಗಿನ ಎಣ್ಣೆ : ಚರ್ಮದ ಬಣ್ಣವನ್ನು ಹಗುರಗೊಳಿಸಲು ತೆಂಗಿನ ಎಣ್ಣೆಯನ್ನು ಎಲ್ಲೆಡೆ ಬಳಸಬಹುದು. ಇದರಲ್ಲಿರುವ ವಿಟಮಿನ್-ಇ ಚರ್ಮದ ಟೋನ್ನ್ನು ಸಮಗೊಳಿಸುತ್ತದೆ ಮತ್ತು ಚರ್ಮವನ್ನು ಸರಿಪಡಿಸುತ್ತದೆ. ಈ ಪರಿಹಾರಕ್ಕಾಗಿ, ಸ್ನಾನದ ನಂತರ, ಮೊಣಕೈ ಮತ್ತು ಮೊಣಕಾಲುಗಳನ್ನು ಕೆಲವು ಹನಿ ಕೊಬ್ಬರಿ ಎಣ್ಣೆಯಿಂದ 10-15 ನಿಮಿಷಗಳ ಕಾಲ ಮಸಾಜ್ ಮಾಡಿ.
ಅಲೋವೆರಾ ಜೆಲ್: ಚರ್ಮದ ಟೋನ್ನ್ನು ಸ್ವಚ್ಛಗೊಳಿಸಲು ಅಲೋವೆರಾ ಜೆಲ್ ಬಳಕೆ ಕೂಡ ಪ್ರಯೋಜನಕಾರಿ. ನೀವು ಮೊಣಕೈ ಮತ್ತು ಮೊಣಕಾಲುಗಳ ಮೇಲೆ ಅಲೋವೆರಾ ಜೆಲ್ನ್ನು ಹಚ್ಚುವುದರಿಂದಲೂ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಕಿತ್ತಳೆಯ ಸಿಪ್ಪೆ: ಕಿತ್ತಳೆಯ ಸಿಪ್ಪೆಯಲ್ಲಿರುವ ವಿಟಿಮಿನ್ ಸಿ ಚರ್ಮಕ್ಕೆ ಕಾಂತಿ ನೀಡುವುದು. ಕಿತ್ತಳೆಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಬೇಕು. ಬಳಿಕ ಇದನ್ನು ಪುಡಿ ಮಾಡಿಟ್ಟುಕೊಳ್ಳಬೇಕು. ಒಂದು ಚಮಚ ಕಿತ್ತಳೆ ಪುಡಿಗೆ ರೋಸ್ ವಾಟರ್ ಹಾಕಿ ಕಲಸಬೇಕು. ಈ ಪೇಸ್ಟ್ನ್ನು ಮೊಣಕೈಗೆ ಹಚ್ಚಿಕೊಂಡು ಒಣಗಲು ಬಿಡಬೇಕು. ಬಳಿಕ ಸ್ಕ್ರಬ್ ಮಾಡಿಕೊಂಡು ತೊಳೆಯಬೇಕು.
ಈ ಟಿಪ್ಸ್ನಲ್ಲಿ ಒಂದನ್ನು ವಾರದಲ್ಲಿ ಮೂರು ದಿನ ಟ್ರೈ ಮಾಡಿ, ಸುಂದರ ಮೊಣಕೈ-ಮೊಣಕಾಲು ನಿಮ್ಮದಾಗಿಸಿಕೊಳ್ಳಿ.